ಬೆಂಗಳೂರು : ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರು ತಮ್ಮ ವಿರುದ್ಧ ಅಭಿಯೋಜನಾ (ಪ್ರಾಸಿಕ್ಯೂಷನ್) ಮಂಜೂರಾತಿ ನೀಡಿರುವುದನ್ನು ಪ್ರಶ್ನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾ ಮಾಡಿದೆ. ಹೀಗಾಗಿ ಮೊದಲ ಹಂತದ ಕಾನೂನು ಹೋರಾಟದಲ್ಲಿ ಸಿದ್ದರಾಮಯ್ಯ ಅವರಿಗೆ ತೀವ್ರ ಹಿನ್ನಡೆಯಾದಂತಾಗಿದೆ.
ರಾಜ್ಯಪಾಲರ ಆದೇಶ ರದ್ದತಿಗೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 12ರಂದು ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇಂದು, ಮಂಗಳವಾರ ಪ್ರಕಟಿಸಿತು.
ರಾಜ್ಯಪಾಲರ ಆದೇಶವು ವಿವೇಚನಾ ಶೂನ್ಯವಾಗಿಲ್ಲ. ಎಲ್ಲವೂ ಕಾನೂನಿನ ಅನ್ವಯವಾಗಿದೆ. ತನಿಖಾಧಿಕಾರಿಯಿಂದ ಮುಂಚಿತವಾಗಿ ತನಿಖೆ ನಡೆಸಿ ವರದಿ ಪಡೆಯಬೇಕಾದ ಅಗತ್ಯವಿಲ್ಲ ಎಂದ ಹೈಕೋರ್ಟ್ ಹೇಳಿದೆ. ಸೆಕ್ಷನ್ 17ಎ ಪಿಸಿ ಕಾಯ್ದೆಯಡಿ ಅನುಮೋದನೆ ಪಡೆಯುವುದು ದೂರಿನ ಕರ್ತವ್ಯವಾಗಿದೆ ಮತ್ತು ರಾಜ್ಯಪಾಲರು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ. “ಅರ್ಜಿಯಲ್ಲಿ ವಿವರಿಸಿರುವ ಸಂಗತಿಗಳ ಪ್ರಕಾರ ತನಿಖೆಯ ಅಗತ್ಯವಿದೆ. ಆದೇಶ (ಮುಖ್ಯಮಂತ್ರಿ ವಿಚಾರಣೆಗೆ) ಸಂಬಂಧಿಸಿದಂತೆ ರಾಜ್ಯಪಾಲರ ಕ್ರಮಗಳಲ್ಲಿ ಯಾವುದೇ ದೋಷವಿಲ್ಲ” ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಹೈಕೋರ್ಟ್ ಏಕಸದಸ್ಯ ಪೀಠ ಹೇಳಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಯ ಒಡೆತನದ್ದು ಎನ್ನಲಾದ ಕೃಷಿ ಭೂಮಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ವಶಪಡಿಸಿಕೊಂಡು ಭೂಮಿಗೆ ಪರ್ಯಾಯವಾಗಿ 14 ನಿವೇಶನ ಹಂಚಿಕೆ ಮಾಡಿರುವುದು ಈ ವಿವಾದದ ಕೇಂದ್ರ ಬಿಂದುವಾಗಿದೆ. ಪರಿಹಾರ ರೂಪದಲ್ಲಿ ನಿವೇಶನಗಳನ್ನು ನೀಡಿರುವ ಪ್ರಕ್ರಿಯೆ ಅಕ್ರಮದಿಂದ ಕೂಡಿದೆ. ಇಡೀ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯನವರು ಪ್ರಭಾವ ಬೀರಿರುವುದು ಕಂಡು ಬಂದಿದೆ ಎಂದು ರಾಜ್ಯಪಾಲರಿಗೆ ಖಾಸಗಿ ದೂರುಗಳು ಸಲ್ಲಿಕೆಯಾಗಿದ್ದವು. ನಂತರ ರಾಜ್ಯಪಾಲರು ತನಿಖೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನಾ (ಪ್ರಾಸಿಕ್ಯೂಷನ್) ಮಂಜೂರಾತಿ ನೀಡಿದ್ದರು. ಇದನ್ನು ರದ್ದುಪಡಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಡಾ. ಅಭಿಷೇಕ ಮನು ಸಿಂಘ್ವಿ ಅವರು “ರಾಜ್ಯ ಸಚಿವ ಸಂಪುಟವು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೀಡಿದ್ದ ಶೋಕಾಸ್ ನೋಟಿಸ್ ಹಿಂಪಡೆಯುವ ಶಿಫಾರಸ್ಸಿನಲ್ಲಿ ಉಲ್ಲೇಖಿಸಿರುವ ಅಂಶಗಳಲ್ಲಿ ಎದ್ದು ಕಾಣುವ ಅತಾರ್ಕಿಕ ಅಂಶಗಳನ್ನು ರಾಜ್ಯಪಾಲರ ಅಭಿಯೋಜನಾ ಮಂಜೂರಾತಿ ಆದೇಶದಲ್ಲಿ ಪಟ್ಟಿ ಮಾಡಿಲ್ಲ. ಬದಲಾಗಿ, ಸಂಪುಟದ ಶಿಫಾರಸ್ಸು ಪಕ್ಷಪಾತಿ ಎಂಬುದನ್ನಷ್ಟೇ ರಾಜ್ಯಪಾಲರು ಹೇಳಿದ್ದಾರೆ. ಆ ಮೂಲಕ ಸ್ವತಂತ್ರವಾಗಿ ವಿವೇಚನೆ ಬಳಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 17ಎ ಅಡಿ ತನಿಖೆಗೆ ಅನುಮತಿಸುವಾಗ ತನಿಖಾಧಿಕಾರಿ ಅಭಿಪ್ರಾಯ ರೂಪಿಸಿರಬೇಕು. ಇದೂ ಹಾಲಿ ಪ್ರಕರಣದಲ್ಲಿ ಅನುಪಾಲನೆಯಾಗಿಲ್ಲ. ಹೀಗಾಗಿ, ರಾಜ್ಯಪಾಲರ ಆದೇಶವನ್ನು ವಜಾ ಮಾಡಬೇಕು” ಎಂದು ಕೋರಿದ್ದರು.
ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿ ಪರವಾಗಿ ವಾದಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡಿರುವ ಪ್ರಕರಣದಲ್ಲಿ ರಾಜ್ಯಪಾಲರು ಸಂಪುಟ ಸಭೆಯ ಶಿಫಾರಸ್ಸನ್ನು ಆಧರಿಸಬೇಕಿಲ್ಲ. ರಾಜ್ಯಪಾಲರ ನಿರ್ಧಾರವು ವಾಸ್ತವಿಕ ಅಂಶಗಳನ್ನು ಆಧರಿಸಿ, ವಿವೇಚನಾಯುತವಾಗಿದೆ. ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 17ಎ ಎಲ್ಲ ಕಡೆ ಅನ್ವಯವಾಗುತ್ತದೆ. ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ದೂರನ್ನು ಓದಿದ ಬಳಿಕ ರಾಜ್ಯಪಾಲರಿಗೆ ಮೇಲ್ನೋಟಕ್ಕೆ ಅಧಿಕಾರ ದುರ್ಬಳಕೆ ಕಂಡು ಬಂದಿರುವುದರಿಂದ ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು. ಅದರ ನಂತರದಲ್ಲಿ ಅವರು ಅಭಿಯೋಜನಾ ಮಂಜೂರಾತಿ ನೀಡಿದ್ದರು” ಎಂದು ವಾದಿಸಿದ್ದರು.
“ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 17ಎ ಅಧಿಕಾರದ ಮೂಲ ಗುಣವೇ ಕಾರ್ಯಕಾರಿ ಮತ್ತು ಆಡಳಿತಾತ್ಮಕವಾಗಿದೆ. ಇದರ ಅಡಿ ಅನುಮತಿ ನೀಡುವಾಗ ಆರೋಪಿಯ ವಾದ ಆಲಿಸಬೇಕಿಲ್ಲ. ಸೆಕ್ಷನ್ 17ಎ ಹಂತದಲ್ಲಿ ಸಹಜ ನ್ಯಾಯ ತತ್ವ ಅನ್ವಯಿಸುವುದಿಲ್ಲ. ಸಂಪುಟ ಸಭೆಯ ನಿರ್ಣಯವು ಏಕೆ ಪಕ್ಷಪಾತದಿಂದ ಕೂಡಿದೆ ಎಂಬುದಕ್ಕೆ ರಾಜ್ಯಪಾಲರು ಟಿಪ್ಪಣಿ ಮಾಡಿದ್ದಾರೆ ಎಂದು ಹೇಳಿದ್ದರು.
ರಾಜ್ಯ ಸರ್ಕಾರದ ಪರವಾಗಿ ವಾದಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ ಶೆಟ್ಟಿ ಅವರು “ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡುವುದಕ್ಕೂ ಮುನ್ನ ತನಿಖಾಧಿಕಾರಿಯ ಪ್ರಾಥಮಿಕ ತನಿಖಾ ವರದಿ ಆಧರಿಸಿ ಸಕ್ಷಮ ಪ್ರಾಧಿಕಾರವಾದ ರಾಜ್ಯಪಾಲರು ನಿರ್ಧರಿಸಬೇಕಿತ್ತು. ಆದರೆ, ರಾಜ್ಯಪಾಲರು ತಾವೇ ತನಿಖಾಧಿಕಾರಿಯ ರೀತಿಯಲ್ಲಿ ನಡೆದುಕೊಂಡಿದ್ದಾರೆ” ಎಂದು ಆಕ್ಷೇಪಿಸಿದ್ದರು.
ಸ್ನೇಹಮಯಿ ಕೃಷ್ಣ ಪರವಾಗಿ ವಾದಿಸಿದ್ದ ಕೆ ಜಿ ರಾಘವನ್ ಅವರು “ಸಾರ್ವಜನಿಕ ಹಿತಾಸಕ್ತಿ ಅಡಗಿರುವುದರಿಂದ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶ ಹೊಂದಲಾಗಿದೆ. ಮಾಧ್ಯಮಗಳಲ್ಲಿ ಮುಡಾ ಹಗರಣ ವರದಿಯಾದ ಬೆನ್ನಿಗೇ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿ (ವೆಂಕಟಾಚಲಪತಿ) ನೇತೃತ್ವದಲ್ಲಿ ಆನಂತರ ಹೈಕೋರ್ಟ್‌ನ ನಿವೃತ್ತ (ಪಿ ಎನ್ ದೇಸಾಯಿ) ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದೆ. ಇದು ಸಾರ್ವಜನಿಕ ನಂಬಿಕೆ ಹಾಳಾಗಿರುವುದಕ್ಕೆ ಉತ್ತರವಾಗಿದೆ. ಉನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸಿರುವ ವ್ಯಕ್ತಿಯ ವಿರುದ್ಧ ತನಿಖೆ ಕೋರಲಾಗಿದೆ. ನ್ಯಾಯಾಲಯವು ಇಂಥ ವಿಚಾರಗಳಲ್ಲಿ ತನಿಖೆಗೆ ಬೆಂಬಲ ಸೂಚಿಸಬೇಕು” ಎಂದು ಕೋರಿದ್ದರು.
ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಪಿ ಎಸ್ ಪ್ರದೀಪಕುಮಾರ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ತಮಗಿರುವ ಆಸಕ್ತಿಯ ಕಾರಣಕ್ಕೆ ಸಂಪುಟದ ಸಚಿವರು ಪ್ರಕರಣದಲ್ಲಿ ಪಕ್ಷಪಾತಿಗಳಾಗುವ ಸಾಧ್ಯತೆಯಿಂದಾಗಿ ರಾಜ್ಯಪಾಲರಿಗೆ ಸಲಹೆ ನೀಡುವ ಅಧಿಕಾರದಿಂದ ವಂಚಿತರಾಗುತ್ತಾರೆ. ರಾಜ್ಯಪಾಲರು ಸಚಿವ ಸಂಪುಟದ ಸಲಹೆಯನುಸಾರ ಕರ್ತವ್ಯವನ್ನು ನಿರ್ವಹಿಸುವುದು ಮಾತ್ರವಲ್ಲದೆ ಅವರು ಸಂವಿಧಾನದ ರಕ್ಷಕರಾಗಿಯೂ ತಮ್ಮ ಕಚೇರಿ ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ” ಎಂದು ಪ್ರತಿಪಾದಿಸಿದ್ದರು.
ಸ್ನೇಹಮಯಿ ಕೃಷ್ಣ ಪರವಾಗಿ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್, ಟಿ ಜೆ ಅಬ್ರಹಾಂ ಪರವಾಗಿ ವಕೀಲ ರಂಗನಾಥ್ ರೆಡ್ಡಿ ವಾದಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ