ಹೈದರಾಬಾದ್: ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ವ್ಯಕ್ತಿಯೊಬ್ಬ ತನ್ನ ಭುಜದ ಮೇಲೆ ಹೊತ್ತುಕೊಂಡು ತುಂಬಿ ಹರಿಯುತ್ತಿರುವ ಅಣೆಕಟ್ಟಿನ ಮೇಲೆ ರಭಸವಾಗಿ ಹರಿಯುವ ಹೊಳೆ ದಾಟುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗದ ಜನವಸತಿ ಪ್ರದೇಶದ ಪಿಂಜರಿಕೊಂಡ ಎಂಬ ಪುಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ವೈರಲ್ ವೀಡಿಯೋ ಮೂಲ ಸೌಕರ್ಯ ಮತ್ತು ಸೌಲಭ್ಯಗಳ ಕೊರತೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಆ ಊರಿಗೆ ಬೇರೆ ದಾರಿಯೇ ಇಲ್ಲದ ಕಾರಣ
ಅವರು ಗರ್ಭಿಣಿ ಮಹಿಳೆಯನ್ನು ಹೊತ್ತುಕೊಂಡು ಉಕ್ಕಿ ಹರಿಯುವ ಹೊಳೆ ದಾಟಿದ್ದಾರೆ.
ಇದು ಅಪಾಯಕಾರಿ ಎಂದು ಗೊತ್ತಿದ್ದರೂ ಅದನ್ನು ದಾಟಿ ಹೋಗುವ ಅನಿವಾರ್ಯತೆ ಅವರಿಗೆ ಇದೆ ಎಂಬುದು ವೇದ್ಯವಾಗುತ್ತದೆ. ಇವರು ಹೀಗೆ ಮಾಡಿದ್ದರಿಂದ ಅವರಿಗೆ ತಕ್ಷಣವೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಯಿತು. ಈ ವೀಡಿಯೊ ಗ್ರಾಮೀಣ ಭಾರತದಲ್ಲಿ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಚರ್ಚೆಗಳಿಗೆ ಕಾರಣವಾಗಿದೆ.
ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತುಕೊಂಡು ತುಂಬಿ ಹರಿಯುವ ಹೊಳೆ ದಾಟುವುದು ಅತ್ಯಂತ ಅಪಾಯಕಾರಿ ಎಂಬುದು ಪಿಂಜಾರಿಕೊಂಡ ಗ್ರಾಮದ ಅವರಿಗೆ ಚೆನ್ನಾಗಿ ಗೊತ್ತು. ಆದರೆ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೇ ಇದ್ದರೆ ಅದೂ ಸಹ ಅಪಾಯಕಾರಿ ಎಂಬುದೂ ಅವರಿಗೆ ಗೊತ್ತು ಎಂದು ಎಕ್ಸ್ ಬಳಕೆದಾರ ಪಿ ಪವನ್ ಬರೆದು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
“ಇದು ಹೃದಯವಿದ್ರಾವಕವಾಗಿದೆ-ಗರ್ಭಿಣಿ ಮಹಿಳೆಯೊಂದಿಗೆ ಅಪಾಯಕಾರಿ ಜೋರಾಗಿ ಹರಿಯುವ ನೀರನ್ನು ದಾಟುವುದು ಅಪಾಯ. ಬುಡಕಟ್ಟು ಪ್ರದೇಶಗಳಲ್ಲಿನ ಈ ಸವಾಲುಗಳಿಗೆ ತುರ್ತು ಗಮನ ಬೇಕು” ಎಂದು ಎಕ್ಸ್ ಬಳಕೆದಾರರು ಬರೆದಿದ್ದಾರೆ.
ಇದು ತುಂಬಾ ಅಪಾಯಕಾರಿ ಮತ್ತು ಭಯಾನಕವಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ, “ಇದು ದೂರದ, ಹಿಂದುಳಿದ ಪ್ರದೇಶಗಳಲ್ಲಿ ಜನರು ಎದುರಿಸುತ್ತಿರುವ ಕಠಿಣ ಪರಿಸ್ಥಿತಿಗಳನ್ನು ಎತ್ತಿ ತೋರಿಸುವ ದುರಂತ ಪರಿಸ್ಥಿತಿಯಾಗಿದೆ. ಅಪಾಯಕಾರಿ ಹೊಳೆಯನ್ನು ದಾಟಲು ಜೀವವನ್ನು ಪಣಕ್ಕಿಡುವುದು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ನಿರ್ಣಾಯಕ ಅಗತ್ಯವನ್ನು ಒತ್ತಿಹೇಳುತ್ತದೆ. ಆದರೆ ಅಗತ್ಯವಿರುವ ಜನಸಂಖ್ಯೆಯ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಆದ್ಯತೆ ನೀಡಬೇಕು ಎಂದು ಇನ್ನೊಬ್ಬರು ಬರೆದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ