ಬೆಂಗಳೂರು: ನವರಾತ್ರಿ ಸಂದರ್ಭ ಅಕ್ಟೋಬರ್ 3ರಿಂದ 7ರ ವರೆಗೆ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಬಳಿಯ ಸ್ನಾನಘಟ್ಟದಲ್ಲಿ ಕಾವೇರಿ ನದಿಗೆ ಆರತಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮಂಡ್ಯ ಜಿಲ್ಲಾ ಉಸ್ತು ವಾರಿ ಸಚಿವ ಎನ್. ಚಲುವ ರಾಯಸ್ವಾಮಿ ನೇತೃತ್ವದಲ್ಲಿ 2 ದಿನಗಳ ಕಾಲ ಹರಿದ್ವಾರ ಮತ್ತು ವಾರಾಣಸಿಯ ಗಂಗಾರತಿ ಅಧ್ಯಯನ ನಡೆಸಿದ್ದ ನಿಯೋಗ, ದಸರಾ ಸಂದರ್ಭ ಕಾವೇರಿ ಆರತಿ ನೆರವೇರಿಸುವುದಾಗಿ ಪ್ರಕಟಿಸಿತ್ತು.
ಅ. 3ರ ಸಂಜೆ 7ಕ್ಕೆ ಕಾವೇರಿ ಆರತಿಯ ಪ್ರಕ್ರಿಯೆಗಳು ಆರಂಭವಾಗಿ 7:45ರ ವರೆಗೆ ನಡೆಯಲಿದೆ. ವಿದ್ವಾಂಸ ಭಾನುಪ್ರಕಾಶ ಶರ್ಮ ಉಸ್ತುವಾರಿ ವಹಿಸಲಿದ್ದಾರೆ. ಪ್ರಧಾನ ಅರ್ಚಕರು ಪೂಜೆ ನೆರವೇರಿ ಸಿದ ಅನಂತರ ಐವರು ಪ್ರತ್ಯೇಕವಾಗಿ ನಿಂತು ತುಪ್ಪದಲ್ಲಿ ನೆನೆಸಿಟ್ಟ ಬತ್ತಿ ಹಾಗೂ ಕರ್ಪೂರ ಸೇರಿಸಿ ಆರತಿ ಮಾಡಲಿದ್ದಾರೆ. ಇದು 11 ನಿಮಿಷಗಳ ಪ್ರಕ್ರಿಯೆಯಾಗಿರುತ್ತದೆ. ಸಚಿವ ಚಲುವರಾಯಸ್ವಾಮಿ ಸೇರಿದಂತೆ ಕಾವೇರಿ ಕೊಳ್ಳದ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಹರಿದ್ವಾರ ಹಾಗೂ ಕಾಶಿ ಮಾದರಿಯಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ಥ ಸಮಯದಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ಕಾವೇರಿ ನದಿಗೂ ಆರತಿ ನಡೆಸುವ ಸಂಬಂಧ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಸ್ಥಳೀಯ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರನ್ನೊಳಗೊಂಡ ರಾಜ್ಯದ ಶಾಸಕರ ನಿಯೋಗ ಕೆಲ ದಿನಗಳ ಹಿಂದಷ್ಟೇ ಹರಿದ್ವಾರ ಹಾಗೂ ವಾರಣಾಸಿಗೆ ಭೇಟಿ ನೀಡಿ ಪರಶೀಲಿಸಿದ್ದರು. ಅಲ್ಲಿನ ಗಂಗಾರತಿ ಸಂಬಂಧ ಮಾಹಿತಿ ಪಡೆದುಕೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ