ʼಕ್ಯಾಶ್ ಆನ್ ಡೆಲಿವರಿʼ ಮಾಡುವುದಾಗಿ ಆನ್ಲೈನ್‌ ನಲ್ಲಿ ಐಫೋನ್ ಆರ್ಡರ್ ; ಹಣ ಕೊಡಬೇಕಲ್ಲ ಎಂದು ಡೆಲಿವರಿ ಏಜೆಂಟನನ್ನು ಕೊಂದೇಬಿಟ್ಟರು…!

ಲಕ್ನೋ: ಆನ್ಲೈನ್‌ನಲ್ಲಿ ಆರ್ಡರ್‌ ಮಾಡಿದ್ದ ₹ 1.5 ಲಕ್ಷ ಬೆಲೆಬಾಳುವ ಐ ಫೋನ್‌ ಅನ್ನು ತಲುಪಿಸಲು ಹೋದ 30 ವರ್ಷದ ವ್ಯಕ್ತಿ ಡೆಲಿವರಿ ಏಜೆಂಟ್‌ ನನ್ನು ಇಬ್ಬರು ಸೇರಿ ಕೊಂದಿರುವ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋನಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಡೆಲಿವರಿ ಏಜೆಂಟನ ಮೃತದೇಹವನ್ನು ಇಂದಿರಾ ಕಾಲುವೆಗೆ ಎಸೆಯಲಾಗಿದ್ದು, ಅದನ್ನು ಪತ್ತೆ ಮಾಡಲು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡವನ್ನು ಕರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿನ್ಹಾಟದ ಗಜಾನನ ಎಂಬಾತ ಫ್ಲಿಪ್‌ಕಾರ್ಟ್‌ ನಲ್ಲಿ ₹ 1.5 ಲಕ್ಷ ಮೌಲ್ಯದ ಐಫೋನ್‌ಗೆ ಆರ್ಡರ್ ಮಾಡಿದ್ದಾರೆ ಮತ್ತು ಸಿಒಡಿ (ಕ್ಯಾಶ್ ಆನ್ ಡೆಲಿವರಿ) ಪಾವತಿಸುವ ಆಯ್ಕೆಯನ್ನು ಆರಿಸಿಕೊಂಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಶಶಾಂಕ ಸಿಂಗ್ ಹೇಳಿದ್ದಾರೆ.

“ಸೆಪ್ಟೆಂಬರ್ 23 ರಂದು ಡೆಲಿವರಿ ಏಜೆಂಟ್‌, ನಿಶಾತಗಂಜ್‌ನ ಭರತ ಸಾಹು ಎಂಬವರು ಐ ಫೋನ್‌ ಆರ್ಡರ್‌ ಮಾಡಿದ್ದ ಗಜಾನನನಿಗೆ ತಲುಪಿಸಲು ಹೋಗಿದ್ದಾರೆ. ಅಲ್ಲಿ ಹಣ ನೀಡುವುದರ ಬದಲು ಗಜಾನನ ಸಹಚರನ ಜೊತೆ ಸೇರಿಕೊಂಡು ಸಾಹುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ, ನಂತರ ಶವವನ್ನು ಗೋಣಿಚೀಲದಲ್ಲಿ ತುಂಬಿ ಇಂದಿರಾ ಕಾಲುವೆಯಲ್ಲಿ ಎಸೆದಿದ್ದಾನೆ ಎಂದು ಅವರು ಹೇಳಿದರು.
ಎರಡು ದಿನವಾದರೂ ಸಾಹು ಮನೆಗೆ ಬಾರದೇ ಇದ್ದಾಗ, ಆತನ ಕುಟುಂಬದವರು ಸೆಪ್ಟೆಂಬರ್ 25 ರಂದು ಚಿನ್ಹತ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

ಪ್ರಮುಖ ಸುದ್ದಿ :-   ಅಮೆರಿಕ ಕಾರು ಕಂಪನಿ ಫೋರ್ಡ್ ಅವಮಾನಿಸಿದ ನಂತರ ʼರತನ್ ಟಾಟಾʼ ಜಾಗ್ವಾರ್-ಲ್ಯಾಂಡ್ ರೋವರ್ ಖರೀದಿಸಿದ್ದೇ ರೋಚಕ...

ಸಾಹು ಅವರ ಫೋನ್‌ ಕರೆ ವಿವರಗಳನ್ನು ಸ್ಕ್ಯಾನ್ ಮಾಡುವಾಗ ಮತ್ತುಆತ ಹೋಗಿದ್ದ ಸ್ಥಳವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿರುವಾಗ, ಪೊಲೀಸರು ಗಜಾನನನ ಮೊಬೈಲ್‌ ಸಂಖ್ಯೆಯನ್ನು ಪತ್ತೆಹಚ್ಚಿದರು ಮತ್ತು ಆತನ ಸ್ನೇಹಿತ ಆಕಾಶನ ಸಂಪರ್ಕ ಸಾಧಿಸಿ ಆತ ಇದ್ದಲ್ಲಿಗೆ ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆಕಾಶ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇಬ್ಬರು ಆರೋಪಿಗಳಾದ ಹಿಮಾಂಶು ಕನೋಜಿಯಾ ಮತ್ತು ಆಕಾಶನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಗಜಾನನ ಪತ್ತೆಗೆ ಮೂರು ತಂಡಗಳನ್ನು ನಿಯೋಜಿಸಲಾಗಿದೆ. ಪೊಲೀಸರಿಗೆ ಶವ ಇನ್ನೂ ಪತ್ತೆಯಾಗಿಲ್ಲ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡವು ಕಾಲುವೆಯಲ್ಲಿ ಕೊಲೆಯಾದ ಭರತ ಶವವನ್ನು ಹುಡುಕಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement