ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌ ; ಕಾಲಮಿತಿಯಲ್ಲಿ 34,863 ಖಾಲಿ ಹುದ್ದೆಗಳ ಭರ್ತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು: ರಾಜ್ಯದಲ್ಲಿನ ವಿವಿಧ ಇಲಾಖೆಗಳಲ್ಲಿನ 34,863 ಖಾಲಿ ಹುದ್ದೆಗಳನ್ನು (Government Jobs) ಕಾಲಮಿತಿಯೊಳಗೆ ಭರ್ತಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸರ್ಕಾರದ ಹಂತದಲ್ಲಿ ವಿವಿಧ ಇಲಾಖೆಗಳ ನೇಮಕಾತಿಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 34,863 ಹುದ್ದೆಗಳನ್ನು ತುಂಬಲು ಕಾಲ ಮಿತಿಯನ್ನು ನಿಗದಿಪಡಿಸಿಕೊಂಡು ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಅಗತ್ಯ ಸೇವೆಗಳ ಇಲಾಖೆಗಳಲ್ಲಿನ ನೇಮಕಾತಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ರಾಜ್ಯದಲ್ಲಿ ನೇಮಕಾತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತಂದು ಯುಪಿಎಸ್‌ಸಿ ಮಾದರಿಯಲ್ಲಿ ಏಕರೀತಿ ನೇಮಕಾತಿ ವ್ಯವಸ್ಥೆ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದ ಎಲ್ಲಾ ನೇಮಕಾತಿ ಪ್ರಾಧಿಕಾರಗಳ ಸಭೆಯಲ್ಲಿ ಕೈಗೊಂಡಿರುವ ಶಿಫಾರಸುಗಳನ್ನು ಪರಿಶೀಲಿಸಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಸೂಚನೆ ನೀಡಿದರು.

ಯುಪಿಎಸ್‌ಸಿಯಲ್ಲಿ ಕೇವಲ ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ಹುದ್ದೆಗಳನ್ನು ಮಾಡಲು ನೇಮಕಾತಿ ಮಾಡಲಾಗುತ್ತಿದೆ. ಇದೇ ರೀತಿ ಕೆಪಿಎಸ್‌ಸಿ ಕೇವಲ ಗ್ರೂಪ್‌ ಎ ಮತ್ತು ಬಿ ಮಾತ್ರ ನೇಮಕಾತಿ ಪ್ರಕ್ರಿಯೆ ನಡೆಸಿ, ಗ್ರೂಪ್‌ ಸಿ ಯಂತಹ ಇತರ ನೇಮಕಾತಿಗಳನ್ನು ಕೆಇಎ ಅಡಿ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ.
371ಜೆ ಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿರುವ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು 2023ರಲ್ಲಿ ಹೊರಡಿಸಿರುವ ಸುತ್ತೋಲೆಯನ್ನು ಅನುಸರಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ಪ್ರಮುಖ ಸುದ್ದಿ :-   ಡಿಸೆಂಬರ್ 17 ರಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ : ಮುನ್ಸೂಚನೆ

ನೇಮಕಾತಿ ಕ್ಯಾಲೆಂಡರ್
ನೇಮಕಾತಿ ಕುರಿತಾಗಿ ವಾರ್ಷಿಕ ಕ್ಯಾಲೆಂಡರ್‌ ಸಿದ್ಧಪಡಿಸಲು ಇರುವ ತೊಡಕುಗಳನ್ನು ನಿವಾರಿಸಬೇಕು. ಆರ್ಥಿಕ ವರ್ಷದ ಆರಂಭದಲ್ಲಿ ಆಯಾ ಇಲಾಖೆಗಳು ನೇಮಕಾತಿಗೆ ಖಾಲಿಯಿರುವ ಹುದ್ದೆಗಳ ಕುರಿತು ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಬೇಕು. ಕಾಲಮಿತಿಯೊಳಗೆ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವ ಕುರಿತು ಏಕರೀತಿಯ ಕ್ಯಾಲೆಂಡರ್‌ ಸಿದ್ಧಪಡಿಸಬೇಕು. ಕೇರಳ ಮಾದರಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವ ಕುರಿತು ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

ಪಿಎಸ್‌ಐ ನೇಮಕಾತಿಯಲ್ಲಿ ದೈಹಿಕ ಪರೀಕ್ಷೆಯನ್ನು ಮೊದಲು ನಡೆಸಲಾಗುತ್ತಿದ್ದು, ಅಬಕಾರಿ ಇಲಾಖೆ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆಯನ್ನು ಮೊದಲು ಮಾಡಲಾಗುತ್ತದೆ. ಅಬಕಾರಿ ಇಲಾಖೆ ಮಾದರಿಯನ್ನು ಪಿಎಸ್‌ಐ ನೇಮಕಾತಿಯಲ್ಲೂ ಅನುಸರಿಸುವ ಕುರಿತು ಪರಿಶೀಲನೆ ನಡೆಸಬೇಕು. ರಾಜ್ಯದಲ್ಲಿ 41 ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಯಾಗದ ಕಾರಣ ನೇಮಕಾತಿ ವಿಳಂಬವಾಗುತ್ತಿದೆ. ಕೆಲವು ಇಲಾಖೆಗಳಲ್ಲಿ ಹಲವು ದಶಕಗಳಿಂದ ಸಿ ಆ್ಯಂಡ್‌ ಆರ್‌ ತಿದ್ದುಪಡಿಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳಿಗೆ ಅನುಕೂಲವಾಗುವಂತೆ ಮಾದರಿ ಸಿ ಆ್ಯಂಡ್‌ ಆರ್‌ ಸಿದ್ಧಪಡಿಸಬೇಕು ಎಂದು ಸೂಚನೆ ನೀಡಿದರು.

ಪ್ರಮುಖ ಸುದ್ದಿ :-   ಬೆಂಗಳೂರು | ಟೆಕ್ಕಿ ನಂತರ ಹೆಂಡತಿ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್‌ ಕಾನ್‌ಸ್ಟೆಬಲ್...! ಡೆತ್​ನೋಟ್​ನಲ್ಲಿ ಕಿರುಕುಳದ ಆರೋಪ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement