ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಬೆಂಗಳೂರು : ಅಂಗಡಿಗೆ ನುಗ್ಗಿ ಮಹಿಳೆ ಕುತ್ತಿಗೆ ಚಾಕು ಹಿಡಿದು ಬೆದರಿಸಿ ಸರಗಳ್ಳತನಕ್ಕೆ ಯತ್ನ: ಹಿಡಿದು ಥಳಿಸಿದ ಜನರು; ವಿಡಿಯೋ ವೈರಲ್‌

ಬೆಂಗಳೂರು: ಚಿನ್ನದ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ ದುಷ್ಕರ್ಮಿಯೊಬ್ಬ, ಸ್ಥಳೀಯರು ಹಿಡಿಯಲು ಮುಂದಾದಾಗ ಮಹಿಳೆಯ ಕುತ್ತಿಗೆಗೆ ಚಾಕು ಹಿಡಿದು ಕೊಲೆ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆಗೆ ಚಾಕು ತೋರಿಸಿ ಹೆದರಿಸಿ, ನಂತರ ಆಕೆಯ ಕೈಗಳನ್ನು ಫೆವಿಕ್ವಿಕ್‌ನಿಂದ ಮೇಜಿಗೆ ಅಂಟಿಸಿ, ಆಕೆಯ ಕೊರಳಲ್ಲಿದ್ದ ಸುಮಾರು 4.5 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಸಿಯಲು ಯತ್ನಿಸಿದ್ದ ಆರೋಪಿಯನ್ನು ಕೊನೆಗೂ ಸ್ಥಳೀಯರು ಸಮಯಪ್ರಜ್ಞೆ ಮೆರೆದು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಕ್ಟೋಬರ್ 31ರಂದು ಬೆಳಿಗ್ಗೆ ಸುಮಾರು 11:45ರ ವೇಳೆಗೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಶೂ ಮತ್ತು ಬ್ಯಾಗ್ ದುರಸ್ತಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಜಯಶ್ರೀ ಎಂಮ ಮಹಿಳೆ ನಗರದ ಪ್ರೀಮಿಯಂ ಶೂ ಮತ್ತು ಬ್ಯಾಗ್ ದುರಸ್ತಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಪ್ರಭುರಾಜ ಅಲಿಯಾಸ್ ರಾಜ್ ಎಂಬಾತ ಏಕಾಏಕಿ ಅಂಗಡಿಯೊಳಗೆ ನುಗ್ಗಿದ್ದಾನೆ.

ಆರಂಭದಲ್ಲಿ ಯಾರೋ ತನ್ನನ್ನು ಹಿಂಬಾಲಿಸಿಕೊಂಡು ಬಂದು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿಕೊಂಡು ತಾನು ಅಪಾಯದಲ್ಲಿರುವಂತೆ ಆರೋಪಿ ನಾಟಕವಾಡಿದ್ದಾನೆ. ಆದರೆ, ಕೆಲವೇ ಕ್ಷಣಗಳಲ್ಲಿ ತನ್ನ ನಿಜವಾದ ಬಣ್ಣ ತೋರಿಸಿದ ಆತ, ಚಾಕು ತೋರಿಸಿ ಜಯಶ್ರೀ ಅವರಿಗೆ ಬೆದರಿಕೆ ಹಾಕಿ ಚಿನ್ನದ ಮಾಂಗಲ್ಯ ಸರವನ್ನು ಕೊಡುವಂತೆ ಒತ್ತಾಯಿಸಿದ್ದಾನೆ. ಸರ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ.
ಜಯಶ್ರೀ ಅವರು ಪ್ರತಿರೋಧ ತೋರದಂತೆ ಅಥವಾ ಅಲ್ಲಿಂದ ತಪ್ಪಿಸಿಕೊಂಡು ಹೋಗದಂತೆ ಮಾಡಲು ಆರೋಪಿ ಪೂರ್ವಸಿದ್ಧತೆಯೊಂದಿಗೆ ತಂದಿದ್ದ ಫೆವಿಕ್ವಿಕ್ ಅಂಟನ್ನು ಅವರ ಎರಡೂ ಕೈಗಳ ಮೇಲೆ ಸುರಿದಿದ್ದಾನೆ. ಬಳಿಕ ಎರಡೂ ಕೈಗಳನ್ನು ಅಂಗಡಿಯ ಮೇಜಿಗೆ ಅಂಟಿಸಿ ಮಹಿಳೆಗೆ ಕೈಗಳನ್ನು ಬಿಡಿಸಿಕೊಳ್ಳಲು ಸಾಧ್ಯವಾಗದಂತೆ ಮಾಡಿದ್ದಾನೆ. ನಂತರ ಆಕೆಯ ಕೊರಳಲ್ಲಿದ್ದ 35 ಗ್ರಾಂ ತೂಕದ, ಸುಮಾರು 4.5 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಮುಂದಾಗಿದ್ದಾನೆ.

ಮಹಿಳೆಯ ಕಿರುಚಾಟಕ್ಕೆ ಧಾವಿಸಿದ ಸ್ಥಳೀಯರು
ಆರೋಪಿ ಸರ ಕಸಿದುಕೊಂಡು ಅಂಗಡಿಯಿಂದ ಪರಾರಿಯಾಗಲು ಯತ್ನಿಸುತ್ತಿದ್ದಂತೆ ಜಯಶ್ರೀ ಅವರು ಜೋರಾಗಿ ಕಿರುಚಿಕೊಂಡಿದ್ದಾರೆ. ಅವರ ಕೂಗಾಟ ಕೇಳಿದ ಅಕ್ಕಪಕ್ಕದ ಅಂಗಡಿಗಳ ವ್ಯಾಪಾರಿಗಳು ಹಾಗೂ ದಾರಿಹೋಕರು ತಕ್ಷಣ ನೆರವಿಗೆ ಧಾವಿಸಿದ್ದಾರೆ.
ಜನರು ಅಂಗಡಿಯತ್ತ ಬರುತ್ತಿರುವುದನ್ನು ಗಮನಿಸಿದ ಆರೋಪಿ, ಜಯಶ್ರೀ ಅವರ ಕುತ್ತಿಗೆಗೆ ಚಾಕು ಹಿಡಿದು, ಯಾರಾದರೂ ಹತ್ತಿರ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೂ ಎದೆಗುಂದದ ಸ್ಥಳೀಯರು ಸಮಯಪ್ರಜ್ಞೆ ಮೆರೆದು ಆತನ ಗಮನವನ್ನು ಬೇರೆಡೆ ಸೆಳೆದು, ಬಳಿಕ ಆತನನ್ನು ಹಿಡಿದುಕೊಂಡಿದ್ದು, ಮಹಿಳೆಯನ್ನು ಸುರಕ್ಷಿತವಾಗಿ ಬಚಾವ್‌ ಮಾಡಿದ್ದಾರೆ.
ಬಳಿಕ ಆರೋಪಿಯನ್ನು ಇಂದಿರಾನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಜಯಶ್ರೀ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಪ್ರಮುಖ ಸುದ್ದಿ :-   ಮುರಸು ಚಂಡಮಾರುತದ ಪರಿಣಾಮ ಕರ್ನಾಟಕದಲ್ಲಿ 4 ದಿನ ಮಳೆ ಸಾಧ್ಯತೆ ; ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಭುರಾಜ ಅಲಿಯಾಸ್ ರಾಜ್‌ನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯ ಹಿನ್ನೆಲೆಯ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಈ ಘಟನೆ ಕುರಿತು ಬೆಂಗಳೂರು ನಗರ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ಸರ ಕಸಿಯಲು ಯತ್ನಿಸಿದ ಪ್ರಕರಣದಲ್ಲಿ ಇಂದಿರಾನಗರ ಪೊಲೀಸರು ತ್ವರಿತವಾಗಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ, ಆರೋಪಿಯನ್ನು ಹಿಡಿಯುವಲ್ಲಿ ಸಾರ್ವಜನಿಕರು ಸಮಯೋಚಿತವಾಗಿ ನೆರವು ನೀಡಿದ್ದನ್ನು ಶ್ಲಾಘಿಸಿದ್ದಾರೆ. ಘಟನೆಯಲ್ಲಿ ಮಹಿಳೆ ಸುರಕ್ಷಿತವಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂಬುದನ್ನೂ ಪೊಲೀಸರು ಖಚಿತಪಡಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement