ಮಂಗಳೂರು: ನಾಪತ್ತೆಯಾಗಿದ್ದ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸಹೋದರ ಹಾಗೂ ಉದ್ಯಮಿ ಮುಮ್ತಾಜ್ ಅಲಿ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.
ಸತತ 28 ಗಂಟೆಗಳ ಕಾರ್ಯಾಚರಣೆ ಬಳಿಕ ಮುಮ್ತಾಝ್ ಅಲಿ ಅವರ ಮೃತದೇಹ ಕೂಳೂರಿನ ಫಲ್ಗುಣಿ ನದಿಯಲ್ಲಿ ಇಂದು ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಭಾನುವಾರ ಮುಂಜಾನೆ ಮೂರು ಗಂಟೆಗೆ ಸುಮಾರಿಗೆ ಮನೆಯಿಂದ ಹೋಗಿದ್ದ ಮುಮ್ತಾಜ್ ಅಲಿ ಅವರ ಕಾರು ನುಜ್ಜುಗುಜ್ಜಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮುಮ್ತಾಜ್ ಅಲಿ ಅವರು ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿತ್ತು. ಭಾನುವಾರ ಅವರ ಶೋಧ ಕಾರ್ಯವನ್ನು ರಕ್ಷಣಾ ತಂಡಗಳು ನಡೆಸಿದ್ದವು. ಆದರೆ, ಇಂದು, ಸೋಮವಾರ ನದಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ.
ಭಾನುವಾರ ಬೆಳಗ್ಗೆ ಉಡುಪಿ – ಮಂಗಳೂರಿನ ಕೂಳೂರು ಸೇತುವೆಯ ಮೇಲೆ ಮುಮ್ತಾಜ್ ಅವರ ಕಾರು ಪತ್ತೆಯಾಗಿತ್ತು. ಅಲ್ಲದೆ, ಕಾರಿನ ಮುಂಭಾಗದ ಬಲಬದಿ ಅಪಘಾತ ನಡೆದಿರುವುದನ್ನು ಸೂಚಿಸಿದ್ದವು.
ಮುಮ್ತಾಜ್ ಅಲಿ ಅವರು ಫಿಶ್‌ಮಿಲ್, ಕಾಲೇಜು ಸೇರಿದಂತೆ ಹಲವು ಉದ್ಯಮ ನಡೆಸುತ್ತಿದ್ದರು. ಮುಮ್ತಾಜ್ ಅಲಿ ಭಾನುವಾರ ಬೆಳಗ್ಗಿನ ಜಾವ 3 ಗಂಟೆಗೆ ಯಾರಿಗೂ ತಿಳಿಯದಂತೆ ತನ್ನ ಬಿಎಂಡಬ್ಲ್ಯೂ ಕಾರನ್ನು (BMW Car) ಚಲಾಯಿಸಿಕೊಂಡು ಕದ್ರಿಯ ತನ್ನ ಮನೆಯಿಂದ ಪಣಂಬೂರು ಬಳಿ ಬಂದಿದ್ದರು. ಅಲ್ಲಿಂದ ವೇಗವಾಗಿ ಕೂಳೂರು ಹೈವೇಯಲ್ಲಿ ಬರುತ್ತಿದ್ದಾಗ ಖಾಸಗಿ ಬಸ್ಸೊಂದಕ್ಕೆ ಡಿಕ್ಕಿ ಹೊಡೆದಿದ್ದರು. ನಂತರ ಅವರ ಕಾರು ಕೋಳೂರು ಸೇತುವೆ ಬಳಿ ಪತ್ತೆಯಾಗಿತ್ತು. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಫಲ್ಗುಣಿ ನದಿಯಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡ ಮುಮ್ತಾಜ್ ಅಲಿ ಅವರಿಗಾಗಿ ಶೋಧ ಕಾರ್ಯ ನಡೆಸಿತ್ತು. ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸಹಿತ ಆರು ಜನರ ವಿರುದ್ದ ಎಫ್‌ಐಆರ್ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ