ಸ್ಟಾಕ್‌ಹೋಮ್: ದಕ್ಷಿಣ ಕೊರಿಯಾದ ಬರಹಗಾರ್ತಿ ಹ್ಯಾನ್ ಕಾಂಗ್ ಅವರಿಗೆ 2024ನೇ ಸಾಲಿನ ಸಾಹಿತ್ಯ ನೊಬೆಲ್ ಪುರಸ್ಕಾರ ಘೋಷಣೆ ಮಾಡಲಾಗಿದೆ.
ಸಣ್ಣ ಕಥೆಗಳು, ಕಾದಂಬರಿ ಮತ್ತು ಕಾವ್ಯ ರಚನೆಯಲ್ಲಿ ಸಕ್ರಿಯರಾಗಿರುವ ಹನ್ ಕಾಂಗ್ ಅವರಿಗೆ ಈ ವರ್ಷದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಗುರುವಾರ ಪ್ರಕಟಿಸಿದೆ.
‘ಮನುಷ್ಯನ ಜೀವನದ ಸೂಕ್ಷ್ಮತೆಗಳು ಹಾಗೂ ಎದುರಿಸಿದ ಆಘಾತಗಳನ್ನು ಹ್ಯಾನ್ ಅವರು ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ಅಕಾಡೆಮಿಯ ನೊಬೆಲ್ ಸಮಿತಿ ಕಾಯಂ ಕಾರ್ಯದರ್ಶಿ ಮ್ಯಾಟ್ಸ್ ಮಲ್ಮ್ ಹೇಳಿದ್ದಾರೆ.
ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುವ ದಕ್ಷಿಣ ಕೊರಿಯಾದ ಸಾಹಿತಿ ಹಾನ್ ಕಾಂಗ್ ಸಾಹಿತ್ಯಿಕ ಹಿನ್ನೆಲೆಯಿರುವ ಕುಟುಂಬದಿಂದಲೇ ಬಂದವರು. ಇವರ ತಂದೆ ಹ್ಯಾನ್ ಸಿಯೋಗ್ ಕೂಡ ಕಾದಂಬರಿಕಾರರು. ಅವರು 1970ರಲ್ಲಿ ದಕ್ಷಿಣ ಕೊರಿಯಾದ ಗ್ವಾಂಗ್ಜು ಎಂಬಲ್ಲಿ ಹ್ಯಾನ್ ಕಾಂಗ್ ಜನಿಸಿದರು. ಕೊರಿಯನ್ ಸಾಹಿತ್ಯದಲ್ಲಿ ಪದವಿ ಪಡೆದ ಹ್ಯಾನ್ ಬರವಣಿಗೆಯನ್ನು ವೃತ್ತಿಯಾಗಿಸಿಕೊಂಡಿದ್ದಾರೆ. ಬಳಿಕ 1995ರಲ್ಲಿ Yeosu (ಮುಂಜಿ ಪಬ್ಲಿಷಿಂಗ್ ಕಂಪನಿ) ಎಂಬ ಶೀರ್ಷಿಕೆಯ ತನ್ನ ಮೊದಲ ಸಣ್ಣ ಕಥಾ ಸಂಕಲನವನ್ನು ಪ್ರಕಟಿಸಿದರು.
ಅವರ ಇತ್ತೀಚಿನ ಕಾದಂಬರಿ ‘ಐ ಡೋ ನಾಟ್ ಬಿಡ್ ಫೇರ್‌ವೆಲ್’ಗೆ 2023ರಲ್ಲಿ ಫ್ರಾನ್ಸ್‌ನಲ್ಲಿ ಮೆಡಿಸಿಸ್ ಪ್ರಶಸ್ತಿ ಮತ್ತು 2024ರಲ್ಲಿ ಎಮಿಲ್ ಗೈಮೆಟ್ ಪ್ರಶಸ್ತಿಯನ್ನು ನೀಡಲಾಯಿತು. 53 ವರ್ಷದ ಹ್ಯಾನ್ ಕಾಂಗ್ ಅವರ ‘ದಿ ವೆಜಿಟೇರಿಯನ್’ ಎಂಬ ಕಾದಂಬರಿಗೆ 2016ರಲ್ಲಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿತ್ತು. ಹಾಗೇ 2018ರಲ್ಲಿ ‘ಹ್ಯೂಮನ್ ಆಕ್ಟ್ಸ್’ ಕೃತಿಯು ಬೂಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಪ್ರವೇಶ ಪಡೆದಿತ್ತು. ‘ದಿ ವೆಜಿಟೇರಿಯನ್’ ಮತ್ತು ‘ಹ್ಯೂಮನ್ ಆಕ್ಟ್ಸ್’ ಕೃತಿಗಳು ಜಾಗತಿಕ ಮನ್ನಣೆ ಪಡೆದಿರುವ ಪುಸ್ತಕಗಳಾಗಿವೆ.
ನಿಮ್ಮ ಕಾಮೆಂಟ್ ಬರೆಯಿರಿ