ಬೆಂಗಳೂರು :ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಕ್ಕೆ ಸೇರಿದ ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನೀಡಿದ್ದ ೫ ಎಕರೆ ಜಮೀನನ್ನು ವಾಪಸ್ ಮಾಡಲು ಖರ್ಗೆ ಕುಟುಂಬ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದಿಂದ ಪಡೆದಿದ್ದ ೧೪ ನಿವೇಶನಗಳನ್ನು ವಾಪಸ್ ಮಾಡಿದ ಬೆನ್ನಲ್ಲೇ ತಮ್ಮ ಕುಟುಂಬಕ್ಕೆ ಸೇರಿದ ಟ್ರಸ್ಟ್‌ಗೆ ಬೆಂಗಳೂರಿನ ಏರೋಸ್ಪೇಸ್ ಪಾರ್ಕ್‌ನಲ್ಲಿ ನೀಡಿದ್ದ ೫ ಎಕರೆ ಜಮೀನನ್ನು ಕೆಐಎಡಿಬಿಗೆ ವಾಪಸ್ ಮಾಡಲು ನಿರ್ಧರಿಸಿರುವ ಖರ್ಗೆ ಕುಟುಂಬ ಈ ಸಂಬಂಧ ಪತ್ರ ಬರೆದಿದೆ.
ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್‌ಖರ್ಗೆ ಅಧ್ಯಕ್ಷರಾಗಿದ್ದು, ಈ ಟ್ರಸ್ಟ್‌ಗೆ ಕೆಐಎಡಿಬಿಯಿಂದ ೫ ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಲಾಗಿದೆ. ಈ ಜಮೀನನ್ನು ಕೆಐಎಡಿಬಿ ನಿಯಮ ಉಲ್ಲಂಘಿಸಿ ಟ್ರಸ್ಟ್‌ಗೆ ನೀಡಲಾಗಿದೆ. ಜಮೀನು ಮಂಜೂರು ಸಂದರ್ಭದಲ್ಲಿ ನಾಗರಿಕ ಸೌಲಭ್ಯ(ಸಿಎ)ದ ನಿವೇಶನ ಹಂಚಲಾಗಿದೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ವಿಪಕ್ಷ ನಾಯಕರು ಆರೋಪಿಸಿದ್ದರು. ಈ ಬಗ್ಗೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಖರ್ಗೆ ಕುಟುಂಬ ಜಮೀನು ವಾಪಸ್ ಮಾಡುವ ತೀರ್ಮಾನಕೈಗೊಂಡಿದೆ. ಜಮೀನು ವಾಪಸ್ ಮಾಡುವ ನಿರ್ಧಾರದ ಬಗ್ಗೆ ಬೆಂಗಳೂರಿನಲ್ಲಿಂದು ಐಟಿ-ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕಖರ್ಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾವು ಟ್ರಸ್ಟ್‌ಗೆ ನಿಯಮಬಾಹಿರವಾಗಿ ಜಮೀನು ಪಡೆದಿಲ್ಲ. ಟ್ರಸ್ಟ್ ಲಾಭಮಾಡುವ ಉದ್ದೇಶದಿಂದ ಮಾಡಿಲ್ಲ. ಪರಿಶಿಷ್ಟ ಜಾತಿಗೆ ಸೇರಿದ್ದರೂ ರಿಯಾಯಿತಿ ದರದಲ್ಲಿ ಜಮೀನು ಪಡೆದಿಲ್ಲ. ಆದರೂ ರಾಜಕೀಯ ಕಾರಣಕ್ಕೆ ಮಾಡಿದ ಆರೋಪಗಳಿಂದ ಬೇಸತ್ತು ವಾಪಸ್ ಮಾಡುವ ತೀರ್ಮಾನವನ್ನು ಮಾಡಿದ್ದೇವೆ. ಈ ಸಂಬಂಧ ಟ್ರಸ್ಟ್‌ನ ಅಧ್ಯಕ್ಷ ರಾಹುಲ್. ಎಂ ಖರ್ಗೆ ಅವರು ಕಳೆದ ಸೆಪ್ಟೆಂಬರ್ ೨೦ ರಂದೇ ಕೆಐಎಡಿಬಿ ಸಿಇಓಗೆ ಜಮೀನನ್ನು ಹಿಂದಿರುಗಿಸುವ ಬಗ್ಗೆ ಪತ್ರ ಬರೆದಿದ್ದಾರೆ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಟ್ರಸ್ಟ್‌ಗೆ ಜಮೀನು ಪಡೆದಿದ್ದನ್ನು ಬಿಜೆಪಿ ದೊಡ್ಡ ಹಗರಣ ನಡೆದಿದೆ ಎಂದು ಬಿಂಬಿಸಿ ಆರೋಪ ಮಾಡುತ್ತಿದೆ. ನಾವು ಟ್ರಸ್ಟ್ ಮಾಡಿರುವುದು ಲಾಭ ಮಾಡುವ ಉದ್ದೇಶದಿಂದ ಅಲ್ಲ. ಶಿಕ್ಷಣನೀಡುವ ಉದ್ದೇಶಕ್ಕೆ ಜಮೀನು ಮಂಜೂರಾಗಿದ್ದರೂ ಜಮೀನನ್ನೂ ಸ್ವಾಧೀನಕ್ಕೆ ಪಡೆದಿಲ್ಲ. ಆದರೆ ಅನಗತ್ಯ ವಿವಾದ, ಆರೋಪಗಳು ಬೇಡ ಎಂಬ ಕಾರಣಕ್ಕೆ ಜಮೀನು ವಾಪಸ್ ಮಾಡುವ ತೀರ್ಮಾನ ಮಾಡಿದ್ದೇವೆ ಎಂದು ಪ್ರಿಯಾಂಕ ಖರ್ಗೆ ಹೇಳಿದರು.
ಏರೋ ಸ್ಪೇಸ್ ಪಾರ್ಕ್‌ನಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಉದ್ದೇಶ ಇತ್ತು. ಅದಕ್ಕಾಗಿ ಜಮೀನಿಗೆ ರಾಹುಲ್‌ಖರ್ಗೆ ಅವರು ಅರ್ಜಿ ಸಲ್ಲಿಸಿದ್ದರು.
ರಾಜಕೀಯದಲ್ಲಿರುವ ನಮಗೆ ಕೆಟ್ಟ ಹೆಸರು ಬರಬಾರದು ಎಂದು ಸೆ. ೨೦ ರಂದೇ ರಾಹುಲ್‌ಖರ್ಗೆ ಅವರು ಜಮೀನು ಹಿಂದಿರುಗಿಸುವ ಬಗ್ಗೆ ಪತ್ರ ಬರೆದಿದ್ದಾರೆ. ವಿಪಕ್ಷದವರಿಗೂ ವಾಸ್ತವ ಏನು ಎಂಬುದು ಗೊತ್ತಿದೆ. ಆದರೂ ಜಮೀನು ವಾಪಸ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ