ಜಬಲ್ಪುರ : ‘ಪಾಕಿಸ್ತಾನ ಜಿಂದಾಬಾದ್ ಹಿಂದೂಸ್ತಾನ್ ಮುರ್ದಾಬಾದ್’ ಎಂದು ಘೋಷಣೆ ಕೂಗಿದ ಆರೋಪಿಗೆ ಮಧ್ಯಪ್ರದೇಶ ಹೈಕೋರ್ಟ್ ಪ್ರತಿ ತಿಂಗಳ ಮೊದಲ ಮತ್ತು ನಾಲ್ಕನೇ ಮಂಗಳವಾರ ಭೋಪಾಲ ಪೊಲೀಸ್ ಠಾಣೆಯಲ್ಲಿ ಹಾರಿಸುವ ರಾಷ್ಟ್ರಧ್ವಜಕ್ಕೆ 21 ಬಾರಿ ನಮಸ್ಕಾರ ಮಾಡಬೇಕು ಹಾಗೂ ಭಾರತ್ ಮಾತಾ ಕಿ ಜೈ” ಎಂದು ಘೋಷಣೆ ಕೂಗಬೇಕು ಎಂದು ಆದೇಶಿಸಿ ಜಾಮೀನು ಮಂಜೂರು ಮಾಡಿದೆ.
ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಫೈಝಲ್ ಅಲಿಯಾಸ್ ಫೈಜಾನ್ ವಿರುದ್ಧ ಕಳೆದ ಮೇನಲ್ಲಿ ಐಪಿಸಿ ಸೆಕ್ಷನ್ 153ಬಿ ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಡಿ.ಕೆ.ಪಲಿವಾಲ್ ಅವರು, ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ. ಐವತ್ತು ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಇಷ್ಟೇ ಮೌಲ್ಯಕ್ಕೆ ಒಬ್ಬರ ಭದ್ರತೆ ಒದಗಿಸಬೇಕು ಎಂಬ ಷರತ್ತು ವಿಧಿಸಿದ್ದಾರೆ.
ತನ್ನ ದೇಶದ ವಿರುದ್ಧವೇ ಆರೋಪಿ ಬಹಿರಂಗವಾಗಿ ಘೋಷಣೆಗಳನ್ನು ಕೂಗಿದ್ದಾನೆ. ವಿಚಾರಣೆ ಮುಗಿಯುವರೆಗೂ ಆರೋಪಿಯು ಪ್ರತಿ ತಿಂಗಳ ಮೊದಲ ಮತ್ತು ನಾಲ್ಕನೇ ಮಂಗಳವಾರ ಭೋಪಾಲದ ಮಿಸ್ರೋಡ್ ಪೊಲೀಸ್ ಠಾಣೆಯ ಮುಂದೆ ಹಾಜರಾಗಬೇಕು. ಭಾರತ್ ಮಾತಾ ಕೀ ಜೈ ಘೋಷಣೆ ಕೂಗುವ ಮೂಲಕ ಠಾಣೆಯ ಮೇಲೆ ಹಾರಿಸಿರುವ ರಾಷ್ಟ್ರಧ್ವಜಕ್ಕೆ 21 ಬಾರಿ ನಮಸ್ಕರಿಸಬೇಕು. ಇದು ಆತನಿಗೆ ತಾನು ಹುಟ್ಟಿ ಬೆಳೆದ ದೇಶದ ಬಗ್ಗೆ ಜವಾಬ್ದಾರಿ ಮತ್ತು ಹೆಮ್ಮೆಯ ಭಾವನೆಯನ್ನು ಉಂಟುಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.
ಭಾರತ ವಿರೋಧಿ ಘೋಷಣೆ ಕೂಗಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಲು ಪ್ರಯತ್ನಿಸಿದ ಆರೋಪದ ಮೇಲೆ ಭೋಪಾಲ್ ನಿವಾಸಿ ಫೈಜಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತನ ಕೃತ್ಯವು ರಾಷ್ಟ್ರೀಯ ಏಕೀಕರಣಕ್ಕೆ ಧಕ್ಕೆ ತರುವಂತಿದೆ ಎಂದು ವಾದಿಸಲಾಯಿತು.
ಆತ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಅದರಲ್ಲಿ ಆತನ ವಕೀಲರು ಆತನನ್ನು ತಪ್ಪಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ವಾದಿಸಿದರು. ಆದಾಗ್ಯೂ, ಆತನ ವಕೀಲರು ಆಪಾದಿತ ಘಟನೆಯ ವೀಡಿಯೊದಲ್ಲಿ, ಅರ್ಜಿದಾರ ಘೋಷಣೆಯನ್ನು ಕೂಗುತ್ತಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ. ಕೆಲವು ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು.
ಮತ್ತೊಂದೆಡೆ, ರಾಜ್ಯದ ಪರ ವಕೀಲರು ಜಾಮೀನು ಮಂಜೂರಾತಿಗೆ ಸಲ್ಲಿಸಿದ ಮನವಿಯನ್ನು ವಿರೋಧಿಸಿದರು ಮತ್ತು ಅವನ ವಿರುದ್ಧ 14 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಮತ್ತು ಆಪಾದಿತ ವೀಡಿಯೊದಲ್ಲಿ ಆತ ದೇಶದ ವಿರುದ್ಧ ಬಹಿರಂಗವಾಗಿ ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು ಎಂದು ವಾದಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ