ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ ‘ಮಹಾ ವಿಕಾಸ್‌ ಅಘಾಡಿ’ ಭಿನ್ನಮತ ಬಹಿರಂಗ…!

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ಶಿವಸೇನೆ-ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿಕೂಟವಾದ ಮಹಾ ವಿಕಾಸ್‌ ಅಘಾಡಿಯಲ್ಲಿನ ಭಿನ್ನಮತ ಬಹಿರಂಗವಾಗಿದೆ. ಶಿವಸೇನೆಯ ಉದ್ಧವ್ ಠಾಕ್ರೆ ಬಣ ಮತ್ತು ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯಗಳು ಬಹಿರಂಗವಾಗಿದ್ದು, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರೊಂದಿಗೆ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಸುವುದಿಲ್ಲ ಎಂದು ಶಿವಸೇನೆ ಹೇಳಿದೆ.
ಇದರ ಬೆನ್ನಲ್ಲೇ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಿತ್ರಪಕ್ಷ ಶಿವಸೇನೆ (ಉದ್ಧವ್‌ ಠಾಕ್ರೆ) ಸಂಸದ ಸಂಜಯ ರಾವತ್ ಅವರನ್ನು ಟೀಕಿಸಿದ್ದಾರೆ.
ವರದಿಗಳ ಪ್ರಕಾರ, ಹಿಂದಿನ ಆಂತರಿಕ ಸಭೆಯಲ್ಲಿ, ಮುಂಬರುವ ಚುನಾವಣೆಗಳಿಗೆ ಸೀಟು ಹಂಚಿಕೆಗಳ ಕುರಿತು, ವಿಶೇಷವಾಗಿ ವಿದರ್ಭದಲ್ಲಿ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸುವ ಕಾಂಗ್ರೆಸ್ ರಾಜ್ಯ ನಾಯಕತ್ವದ ಸಾಮರ್ಥ್ಯವನ್ನು ಸಂಜಯ ರಾವತ್ ಪ್ರಶ್ನಿಸಿದ್ದರು. ಅಲ್ಲದೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ ಮತ್ತು ಮುಕುಲ್ ವಾಸ್ನಿಕ್ ಮತ್ತು ಪಕ್ಷದ ಮಹಾರಾಷ್ಟ್ರ ಉಸ್ತುವಾರಿ ರಮೇಶ್ ಚೆನ್ನಿತ್ತಲಾ ಅವರೊಂದಿಗೆ ಮಾತನಾಡಿದ್ದೇವೆ. ನಂತರ ರಾಹುಲ್ ಗಾಂಧಿಯವರೊಂದಿಗೆ ಮಾತನಾಡುತ್ತೇವೆ ಎಂದು ಸಂಜಯ ರಾವತ್‌ ಹೇಳಿದ್ದರು.

ಪ್ರಮುಖ ಸುದ್ದಿ :-   ವಿಶ್ವ ಚೆಸ್ ಚಾಂಪಿಯನ್‌ ಶಿಪ್ ಪ್ರಶಸ್ತಿ ಗೆದ್ದ ಗುಕೇಶಗೆ 5 ಕೋಟಿ ರೂ.ಬಹುಮಾನ ಘೋಷಿಸಿದ ತಮಿಳುನಾಡು ಸರ್ಕಾರ

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸಂಜಯ ರಾವತ್ ಅವರ ಹೇಳಿಕೆ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಅವರು, “ಸಂಜಯ ರಾವತ್ ಅವರು ತಮ್ಮ ಪಕ್ಷದ ನಾಯಕತ್ವವನ್ನು [ಉದ್ಧವ್ ಠಾಕ್ರೆ] ಕಡೆಗಣಿಸುತ್ತಿದ್ದರೆ, ಅದು ಅವರಿಗೆ ಸಂಬಂಧಿಸಿದ ವಿಷಯ ಎಂದು ಖಾರವಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಶಿವಸೇನೆ (ಉದ್ಧವ್‌ ಠಾಕ್ರೆ) ನಾಯಕ ಅನಿಲ ದೇಸಾಯಿ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಶರದ್ ಪವಾರ್) ನಾಯಕ ಜಿತೇಂದ್ರ ಅವ್ಹಾದ್ ಅವರು ನಾನಾ ಪಟೋಲೆ ಅವರನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಮೈತ್ರಿಯೊಳಗೆ ಯಾವುದೇ ಮಹತ್ವದ ಭಿನ್ನಾಭಿಪ್ರಾಯವಿಲ್ಲ ಎಂದು ದೇಸಾಯಿ ಅವರು ಭಿನ್ನಾಭಿಪ್ರಾಯವನ್ನು ಶಮನಗೊಳಿಸಲು ಪ್ರಯತ್ನಿಸಿದರು.
ಕಾಂಗ್ರೆಸ್, ಶಿವಸೇನೆ (ಯುಬಿಟಿ), ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ಗೆ ಕ್ರಮವಾಗಿ 119-86-75 ಸ್ಥಾನಗಳಲ್ಲಿ ಸ್ಪರ್ಧಿಸುವ ಬಗ್ಗೆ ಮೈತ್ರಿಕೂಟದ ಸೀಟು ಹಂಚಿಕೆ ಮಾತುಕತೆ ಬಹುತೇಕ ಅಂತಿಮಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯುಕ್ತ ಚೋಕಲಿಂಗಂ ಅವರನ್ನು ಭೇಟಿಯಾದ ನಂತರ ಶಿವಸೇನೆಯ ಸಾರ್ವಜನಿಕ ಸಂಪರ್ಕ ಕಚೇರಿಯಲ್ಲಿ ಮಹಾರಾಷ್ಟ್ರ ವಿಕಾಸ ಅಘಾಡಿ (MVA) ಪತ್ರಿಕಾಗೋಷ್ಠಿಯನ್ನು ಕರೆದಿತ್ತು.
ಆದಾಗ್ಯೂ, ಭಿನ್ನಾಭಿಪ್ರಾಯವು ಮಹಾರಾಷ್ಟ್ರ ವಿಕಾಸ ಅಘಾಡಿ (MVA) ಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಬಹಿರಂಗಪಡಿಸಿತು, ಇದು ಈಗಾಗಲೇ ತನ್ನ ಸೀಟು ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಲು ಹೆಣಗಾಡುತ್ತಿದೆ. ವಿಶೇಷವಾಗಿ ಕಾಂಗ್ರೆಸ್ ಮತ್ತು ಶಿವಸೇನೆ (UBT) ನಡುವಿನ ಭಿನ್ನಾಭಿಪ್ರಾಯವು ಬಹಿರಂಗವಾಗಿಯೇ ಕಾಣುತ್ತಿದೆ. ವಿದರ್ಭ ಪ್ರದೇಶದ ಸೀಟು ಹಂಚಿಕೆಯು ವಿವಾದಾಸ್ಪದ ಬಿಂದುವಾಗಿ ಉಳಿದಿದೆ, ಈ ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳನ್ನು ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ. ಶಿವಸೇನೆ ಇದಕ್ಕೆ ಅಪಸ್ವರ ಎತ್ತಿದೆ.
ಮಹಾರಾಷ್ಟ್ರ ವಿಕಾಸ ಅಘಾಡಿ ನಾಯಕರು ತಮ್ಮ ಸೀಟು ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಲು ದೆಹಲಿಗೆ ತೆರಳಿದ ವೇಳೆ ಎಂವಿಎ ಮೈತ್ರಿಕೂಟವು ತನ್ನ ಆಂತರಿಕ ವಿವಾದಗಳನ್ನು ಪರಿಹರಿಸುತ್ತದೆಯೇ ಮತ್ತು ಬಿಜೆಪಿ ನೇತೃತ್ವದ ಒಕ್ಕೂಟದ ವಿರುದ್ಧ ಐಕ್ಯರಂಗವನ್ನು ಪ್ರಸ್ತುತಪಡಿಸಬಹುದೇ ಎಂದು ಕಾದು ನೋಡಬೇಕಾಗಿದೆ.

ಪ್ರಮುಖ ಸುದ್ದಿ :-   ಆರ್‌.ಜಿ. ಕರ್ ಕಾಲೇಜ್‌ ವೈದ್ಯೆ ಅತ್ಯಚಾರ-ಕೊಲೆ ಪ್ರಕರಣ ; ಮಾಜಿ ಪ್ರಾಂಶುಪಾಲ ಸಂದೀಪ ಘೋಷ್‌ ಗೆ ಜಾಮೀನು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement