ಬೆಳಗಾವಿ: ಅಕ್ರಮವಾಗಿ ಹಣ ಸಾಗಾಟ ಮಾಡಲು ವಾಹನದ ಕ್ಯಾಬಿನ್ ಮಾರ್ಪಾಡು ಮಾಡಿ ಹಣ ಸಾಗಿಸುತ್ತಿದ್ದ ಇಬ್ಬರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದು, ಅವರಿಂದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ
2.73 ಕೋಟಿ ಹಣವನ್ನ ಜಪ್ತಿ ಮಾಡಿಕೊಂಡಿದ್ದಾರೆ.
ಶುಕ್ರವಾರ ಸಂಜೆ ಮಹಾರಾಷ್ಟ್ರದ ಸಾಂಗ್ಲಿಯಿಂದ ಹುಬ್ಬಳ್ಳಿ ಕಡೆ ಗೂಡ್ಸ್ ವಾಹನದಲ್ಲಿ ಸೂಕ್ತ ದಾಖಲೆ ಇಲ್ಲದೆ ಹಣ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಮಾಳ ಮಾರುತಿ ಪೊಲೀಸರು ವಾಹನ ತಡೆದು ವಿಚಾರಣೆ ನಡೆಸಿದರು. ಪೊಲೀಸರು ವಾಹನ ಚಾಲಕರನ್ನು ವಶಕ್ಕೆ ಪಡೆದಿದ್ದು, ಹಾಗೂ ಹಣವನ್ನ ವಾಹನ ಸಮೇತ ಜಪ್ತಿ ಮಾಡಿದ್ದಾರೆ.
ಹಣದ ಮೂಲ ಹಾಗೂ ಏಕೆ ಹಣ ಸಾಗಾಟ ಮಾಡಲಾಗುತ್ತಿತ್ತು ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಾಂಗ್ಲಿಯ ಸಚಿನ್ ಮೇನಕುದಳಿ ಮತ್ತು ಮಾರುತಿ ಮಾರಗುಡಿ ಎಂಬವರನ್ನು ಬಂಧಿಸಿರುವ ಪೊಲೀಸರು ಅವರಿಂದ ಒಟ್ಟು ಒಟ್ಟು 2,73, 27, 500 ₹ ಹಣವನ್ನು ವಶಕ್ಕೆ ಪಡೆದಿದ್ದಾರೆ. ಹಣವನ್ನು ಅಕ್ರಮವಾಗಿ ಸಾಗಾಟ ಮಾಡಲು ವಾಹನದ ಕ್ಯಾಬಿನ್ ನಲ್ಲಿ ಮಾರ್ಪಾಡು ಮಾಡಿರುವುದು ವಿಚಾರಣೆ ವೇಳೆ ಪೊಲೀಸರಿಗೆ ಗೊತ್ತಾಗಿದೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದೀಗ ಉಭಯ ರಾಜ್ಯಗಳ ನಡುವೆ ಅಕ್ರಮ ಹಣ ಸಾಗಾಟ ನಡೆಯುವ ಕುರಿತು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ