ಮೈಸೂರು : ದುಬಾರೆ ಆನೆ ಶಿಬಿರದಲ್ಲಿ ದಸರಾ ಆನೆ ಧನಂಜಯ ತನ್ನ ಸಹ ಆನೆ ಕಂಜನ್ ಜೊತೆ ಎರಡನೇ ಬಾರಿಗೆ ಘರ್ಷಣೆ ನಡೆಸಿರುವುದು ವರದಿಯಾಗಿದೆ. ಅಕ್ಟೋಬರ್ 20 ರ ಭಾನುವಾರ ಈ ಘಟನೆ ಸಂಭವಿಸಿದೆ, ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದ ಮಾವುತ ಕೊನೆಗೂ ಧನಂಜಯ ಆನೆಯನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾದರು.
ಧನಂಜಯ ಆನೆ ಮತ್ತೆ ಕಂಜನ್ ಆನೆ ಮೇಲೆ ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸ್ಥಳೀಯರ ಪ್ರಕಾರ ಕಂಜನ್ ಆನೆ ಸುಮ್ಮನೆ ನಿಂತಿದ್ದ ವೇಳೆ ಏಕಾಏಕಿ ಧನಂಜಯ ಆನೆ ಕಂಜನ್ ಮೇಲೆ ದಾಳಿಗೆ ಮುಂದಾಗಿದೆ. ಈ ವೇಳೆ ಆನೆ ಕೊಂಚ ಮುಂದೆ ಓಡಿದ್ದು ಆಗಲೂ ಬಿಡದ ಧನಂಜಯ ಆನೆ ಆದರ ಹಿಂಭಾಗದಿಂದ ದಾಳಿ ನಡೆಸಿದೆ.
ಈ ವೇಳೆ ಸ್ಥಳದಲ್ಲೇ ಇದ್ದ ಮಾವುತರು ಧನಂಜಯ ಆನೆಯನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದು ಬಳಿಕ ಆನೆಗಳು ತಮ್ಮ ತಮ್ಮ ಜಾಗದಲ್ಲಿ ಬಂದು ನಿಂತವು ಎಂದು ಹೇಳಲಾಗಿದೆ. ಮಾವುತರು ಮತ್ತು ಕಾವಾಡಿಗರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಘಟನೆಯಲ್ಲಿ ಕಂಜನ್ ಆನೆಗೆ ಯಾವುದೇ ಗಂಭೀರ ಪೆಟ್ಟುಗಳಾಗಿಲ್ಲ ಎಂದು ಮಾವುತರು ಹೇಳಿದ್ದಾರೆ.
2013ರಲ್ಲಿ ಹಾಸನದ ಯಸಳೂರು ರೇಂಜ್‌ನಲ್ಲಿ ಸೆರೆ ಸಿಕ್ಕ 44 ವರ್ಷದ ಧನಂಜಯ ಆನೆ ಒಂದು ತಿಂಗಳ ಹಿಂದೆ ದಸರಾ ತಾಲೀಮಿನ ವೇಳೆ ಆಕ್ರಮಣಕಾರಿ ವರ್ತನೆ ತೋರಿತ್ತು.
ಸೆಪ್ಟೆಂಬರ್ 21ರಂದು ಮೈಸೂರು ಅರಮನೆ ಆನೆ ಶಿಬಿರದಲ್ಲಿ ದಸರಾ ಮಹೋತ್ಸವದ ಸಿದ್ಧತೆ ವೇಳೆ ಧನಂಜಯ ಹಾಗೂ 25ರ ಹರೆಯದ ಕಂಜನ್ ನಡುವೆ ಮೊದಲ ಘರ್ಷಣೆ ನಡೆದಿತ್ತು.
ಆ ಘಟನೆಯಲ್ಲಿ ಧನಂಜಯನು ರಾತ್ರಿ ಅರಮನೆಯ ಜಯಮಾರ್ತಾಂಡ ಗೇಟ್ ವರೆಗೆ ಕಂಜನ್ ಆನೆಯನ್ನು ಅಟ್ಟಿಸಿಕೊಂಡು ಬಂದಿತ್ತು.ಮಾವುತರು ಮತ್ತು ಕಾವಾಡಿಗಳು ಎರಡೂ ಆನೆಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ರಸ್ತೆಗೆ ಓಡಿ ಹೋಗಿದ್ದ ಕಂಜನ್ ಆನೆಯನ್ನು ಬಳಿಕ ಅರಮನೆ ಆವರಣಕ್ಕೆ ಮಾವುತರು ಕರೆತಂದಿದ್ದರು.
.
ನಿಮ್ಮ ಕಾಮೆಂಟ್ ಬರೆಯಿರಿ