ಬೆಂಗಳೂರು : ತೀವ್ರ ಕುತೂಹಲ ಮೂಡಿಸಿದ್ದ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಆಯ್ಕೆ ಕುರಿತು ಇದ್ದ ಗೊಂದಲಕ್ಕೆ ತೆರೆ ಬಿದ್ದಿದ್ದು, ಕೊನೆಗೂ ಅಭ್ಯರ್ಥಿ ಘೋಷಣೆಯಾಗಿದೆ. ಇಂದು, ಗುರುವಾರ ಬೆಳಗ್ಗೆ ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗಿದೆ.
ನಾಮಪತ್ರ ಸಲ್ಲಿಕೆಗೆ ಶುಕ್ರವಾರ (ಅಕ್ಟೋಬರ್ ೨೫) ಕೊನೆಯ ದಿನವಾಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಸರು ಘೊಷಣೆ ಮಾಡಲಾಗಿದೆ. ಬಳಿಕ ಬಿಎಸ್ ಯಡಿಯೂರಪ್ಪ ನಿವಾಸದಲ್ಲಿ ನಡೆದ ಜೆಡಿಎಸ್-ಬಿಜೆಪಿ ನಾಯಕರ ಸಮನ್ವಯ ಸಭೆ ಬಳಿಕ ನಿಖಿಲ್ ಹೆಸರು ಬಹಿರಂಗವಾಗಿ ಘೋಷಣೆ ಮಾಡಲಾಯಿತು. ಸ್ವತಃ ಯಡಿಯೂರಪ್ಪ ಅವರೇ ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧಿಸುತ್ತಾರೆ ಎಂದು ಪ್ರಕಟಿಸಿದರು.
ಇದಕ್ಕೂ ಮೊದಲು ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ನಾಯಕರ ಜೊತೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ ಅವರು, ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಿಖಿಲ್ ಸ್ಪರ್ಧೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಕುಮಾರಸ್ವಾಮಿಯನ್ನು ಹೇಗಾದರೂ ಮಾಡಿ ರಾಜಕೀಯವಾಗಿ ಮುಗಿಸಬೇಕು ಎಂದು ಹೊರಟಿದ್ದಾರೆ. ಇದಕ್ಕೆ ಚನ್ನಪಟ್ಟಣದ ಕಾರ್ಯಕರ್ತರು, ಜನರು ಉತ್ತರ ಕೊಡಬೇಕು. ನಾನೇ ಚನ್ನಪಟ್ಟಣಕ್ಕೆ ಬಂದು ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.
ಕುಮಾರಸ್ವಾಮಿ ರಾಜೀನಾಮೆ ನೀಡಿದ ನಂತರ ತೆರವಾಗಿರುವ ಕ್ಷೇತ್ರಕ್ಕೆ ದೇವೇಗೌಡರ ಕುಟುಂಬದವರೇ ಅಭ್ಯರ್ಥಿ ಆಗಬೇಕು ಎಂದು ಕಾರ್ಯಕರ್ತರ ಒತ್ತಾಯ ಮಾಡಿದ್ದರು. ಅಷ್ಟೇ ಅಲ್ಲದೇ ನಿಖಿಲ್ ಅಭ್ಯರ್ಥಿ ಆಗಬೇಕು ಎಂದು ಪಟ್ಟಿಹಿಡಿದಿದ್ದರು ಒತ್ತಡಕ್ಕೆ ಮಣಿದ ಜೆಡಿಎಸ್ ವರಿಷ್ಠರು ಅಂತಿಮವಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನೇ ಕಣಕ್ಕೆ ಇಳಿಸಲು ನಿರ್ಧರಿಸಿದರು.
ಈಗಾಗಲೇ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಸತತ ಎರಡು ಸೋಲುಕಂಡಿರುವ ನಿಖಿಲ್ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣ ಉಪಚುನಾವಣೆ ಕಣಕ್ಕಿಳಿಸಲಾಗಿದೆ. ಈ ಚುನಾವಣೆಯಲ್ಲಿ ನಿಖಿಲ್ ಭವಿಷ್ಯ ಏನಾಗಲಿದೆ ಎಂದು ನೋಡಬೇಕಿದೆ.
ನಿಮ್ಮ ಕಾಮೆಂಟ್ ಬರೆಯಿರಿ