ಬೆಂಗಳೂರು: ಬೇಲೇಕೇರಿ ಬಂದರು ಮೂಲಕ ನಡೆದ ಅಕ್ರಮ ಅದಿರು ಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರು ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ(ಅ24) ತೀರ್ಪು ನೀಡಿದೆ. ಕೋರ್ಟ್ ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ಹೇಳಿದೆ.
ಜಪ್ತಿ ಮಾಡಿ ಇಡಲಾಗಿದ್ದ 11,312 ಮೆಟ್ರಿಕ್ ಟನ್ ಅದಿರನ್ನು ಅನುಮತಿ ಇಲ್ಲದೇ ಸಾಗಿಸಿದ ಪ್ರಕರಣದಲ್ಲಿ ಒಟ್ಟು 6 ಪ್ರಕರಣಗಳಿಗೆ ಸಂಬಂಧಿಸಿ ತೀರ್ಪು ಪ್ರಕಟಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ ಅವರು ಕಾರವಾರ ಶಾಸಕ ಸತೀಶ್ ಸೈಲ್, ಹಲವರ ವಿರುದ್ಧ ಪ್ರಕರಣದಲ್ಲಿ ಎಲ್ಲಾ ಆರೋಪಿಗಳು ದೋಷಿಗಳು ಎಂದು ತೀರ್ಪು ಪ್ರಕಟಿಸಿದ್ದಾರೆ. ಶಾಸಕ ಸೈಲ್ ಸೇರಿ ಎಲ್ಲ ದೋಷಿಗಳನ್ನು ವಶಕ್ಕೆ ಪಡೆಯಲು ಕೋರ್ಟ್ ಸೂಚಿಸಿದೆ.
ಒಟ್ಟು 6 ಪ್ರಕರಣಗಳಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಅಂತಿಮ ಆದೇಶ ಹೊರಡಿಸಿದೆ. ಬೇಲೇಕೇರಿ ಅದಿರು ನಾಪತ್ತೆಗೆ ಸಂಬಂಧಿಸಿದಂತೆ ದಾಖಲಾದ 6 ಪ್ರಕರಣಗಳ ಸಂಬಂಧ ತನಿಖೆ ನಡೆಸಿದ್ದ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿತ್ತು. ಇದೀಗ ಕೋರ್ಟ್ ಆವರಣದಲ್ಲೇ ಆರೋಪಿಗಳನ್ನು ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳು ಅವರನ್ನು ಜೈಲಿಗೆ ಶಿಫ್ಟ್ ಮಾಡಲಿದ್ದಾರೆ ಎಂದು ವರದಿಯಾಗಿದೆ. ಉಪ ಚುನಾವಣೆ ವೇಳೆ ಕಾಂಗ್ರೆಸ್ ಶಾಸಕರೊಬ್ಬರು ಅಕ್ರಮದ ಪ್ರಕರಣದಲ್ಲಿ ದೋಷಿ ಎನಿಸಿಕೊಂಡಿರುವುದು ರಾಜಕೀಯ ಅಸ್ತ್ರವಾಗಿ ಬಳಕೆಯಾಗುವ ಸಾಧ್ಯತೆಗಳಿವೆ.
ನಿಮ್ಮ ಕಾಮೆಂಟ್ ಬರೆಯಿರಿ