ಉಡುಪಿ: ಕಾರ್ಕಳ ತಾಲೂಕು ಅಜೆಕಾರಿನ ಮರ್ಣೆಯಲ್ಲಿ ಪತ್ನಿ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಪತ್ನಿ ಪ್ರತಿಮಾ ತನ್ನ 44 ವರ್ಷದ ಪತಿ ಬಾಲಕೃಷ್ಣ ಅವರಿಗೆ ಊಟದಲ್ಲಿ ವಿಷ ಬೆರೆಸಿ ನಂತರ ಬೆಡ್ ಶೀಟ್ ನಿಂದ ಉಸಿರುಗಟ್ಡಿಸಿ ಕೊಲೆ ಮಾಡಿದ್ದಾಳೆ ಎಂದು ಹೇಳಲಾಗಿದೆ. ಈ ಸಂಬಂಧ ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ ಹೆಗ್ಡೆ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಸುಮಾರು 25 ದಿನಗಳಿಂದ ಬಾಲಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದರು. ಮಂಗಳೂರು ವೆನ್ಲಾಕ್, ಬೆಂಗಳೂರು ನಿಮಾನ್ಸ್ ,ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲಾಗಿತ್ತು. ಆದರೆ, ಅಕ್ಟೋಬರ್ 20ರಂದು ಬಾಲಕೃಷ್ಣ ಮನೆಯಲ್ಲಿ ಮೃತಪಟ್ಟಿದ್ದರು. ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಹೋದರ ಪೊಲೀಸರಿಗೆ ದೂರು ನೀಡಿದ ಬಳಿಕ ಇಡೀ ಪ್ರಕರಣ ಬೆಳಕಿಗೆ ಬಂದಿದೆ.
ಅಜೆಕಾರು ಪೊಲೀಸರು ಪ್ರತಿಮಾ ಹಾಗೂ ಪ್ರಿಯಕರ ದಿಲೀಪನನ್ನು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಕೊಲೆ ರಹಸ್ಯ ಬಾಯಿಬಿಟ್ಟಿದ್ದಾರೆ. ಪ್ರತಿಮಾಗೆ ರೀಲ್ಸ್ ಹುಚ್ಚು ಇತ್ತು.ಪತಿ ಬಾಲಕೃಷ್ಣ ಅವರನ್ನು ಬಲವಂತ ಪಡಿಸಿ ಅವರ ಜೊತೆ ಸೇರಿ ರೀಲ್ಸ್ ಮಾಡಿದ್ದಳು. ಈ ರೀಲ್ಸ್ ಗಳನ್ನು ಪೋಸ್ಟ್ ಸಹ ಮಾಡಿದ್ದಳು. ಇದರ ಮೂಲಕವೇ instagram ನಲ್ಲಿ ದಿಲೀಪ ಮತ್ತು ಪ್ರತಿಮಾ ನಡುವೆ ಪರಿಚಯವಾಗಿ ಅದು ಪ್ರಣಯಕ್ಕೆ ತಿರುಗಿತ್ತು. ನಂತರ ತಮ್ಮಿಬ್ಬರ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಾರೆ ಎಂದು ಗ್ರಹಿಸಿದ್ದ ಇಬ್ಬರು ಸೇರಿ ಬಾಲಕೃಷ್ಣರನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ನಡುವೆ ಇದ್ದಕ್ಕಿದ್ದಂತೆ ಬಾಲಕೃಷ್ಣ ಅವರಿಗೆ ಅನಾರೋಗ್ಯ ಉಂಟಾಗಿದೆ. ವಾಂತಿ ಬೇಧಿ ಶುರುವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಗಂಡನಿಗೆ ಕಾಮಾಲೆ ರೋಗ ಎಂದು ಆಕೆ ಬಿಂಬಿಸಿ ಕಾರ್ಕಳದ ಆಸ್ಪತ್ರೆಗೆ ದಾಖಲಿಸಿದ್ದಾಳೆ. ನಂತರ ಮಣಿಪಾಲ, ಮಂಗಳೂರು ಬೆಂಗಳೂರು ಆಸ್ಪತ್ರೆಗಳಲ್ಲಿ ಹೀಗೆ ಹಲವೆಡೆ ಚಿಕಿತ್ಸೆ ನೀಡಲಾಗಿದೆ. ಆದರೆ ಚೇತರಿಕೆ ಕಾಣಲಿಲ್ಲ. ಬಾಲಕೃಷ್ಣ ಅಕ್ಟೋಬರ್ 20 ರಂದು ಮೃತ ಪಟ್ಟಿದ್ದಾರೆ.
ಆಗ ಅವರ ಸಹೋದರ ರಾಮಕೃಷ್ಣ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರತಿಮಾ ಮೇಲೆ ದೂರು ದಾಖಲು ಆಗುತ್ತಿದ್ದಂತೆ ಆಕೆಯ ಸಹೋದರ ಸಂದೀಪನಿಗೂ ಭಾವನ ಸಾವಿನ ಬಗ್ಗೆ ಸಂದೇಹ ಬಂದಿದೆ. ನಂತರ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಸಹೋದರನ ಬಳಿ ತನ್ನ ಪತಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ನನಗೆ ದಿಲೀಪ್ ಹೆಗ್ಡೆಯನ್ನು ಬಿಟ್ಟು ಇರಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಪತಿಯನ್ನು ದೂರ ಮಾಡಲು ಸಹ ಕಾರಣ ಇರಲಿಲ್ಲ. ಹೀಗಾಗಿ ಬಾಲಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದಾಗ ಪ್ರಿಯಕರನೊಂದಿಗೆ ಸೇರಿಕೊಂಡು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಮೃತ ಬಾಲಕೃಷ್ಣ ಅವರ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ