ಹೈದರಾಬಾದ್: 30ರ ಹರೆಯದ ಮಗನ ಶವದ ಜತೆ ವಯೋವೃದ್ಧ, ದೃಷ್ಟಿ ವಿಕಲಚೇತನ ದಂಪತಿ ನಾಲ್ಕು ದಿನಗಳ ಕಾಲ ಇದ್ದಾರೆ. ಅವರಿಗೆ ಆತ ಸತ್ತಿದ್ದಾನೆ ಎಂಬುದೇ ಅವರಿಗೆ ಗೊತ್ತಾಗಿಲ್ಲ. ಹೈದರಾಬಾದ್‌ನ ಬ್ಲೈಂಡ್ಸ್ ಕಾಲೋನಿಯಲ್ಲಿರುವ ದಂಪತಿಯ ಅಕ್ಕಪಕ್ಕದ ಮನೆಯವರು ಇವರ ಮನೆಯಿಂದ ದುರ್ವಾಸನೆ ಹೊರಹೊಮ್ಮುವುದನ್ನು ಗಮನಿಸಿ ಸೋಮವಾರ ಪೊಲೀಸರಿಗೆ ಕರೆ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ನಿವೃತ್ತ ಸರ್ಕಾರಿ ನೌಕರರಾದ ಕಾಲುವ ರಮಣ ಮತ್ತು ಅವರ ಪತ್ನಿ ಶಾಂತಿಕುಮಾರಿ ಅವರು ತಮ್ಮ ಕಿರಿಯ ಮಗ ಪ್ರಮೋದ ಅವರೊಂದಿಗೆ ಬಾಡಿಗೆ ಅಪಾರ್ಟ್ಮೆಂಟಿನಲ್ಲಿ ವಾಸಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಮೋದ ಅವರು ಮದ್ಯವ್ಯಸನಿಯಾಗಿದ್ದರು. ಹೀಗಾಗಿ ಅವರ 30ರ ಹರೆಯದ ಪತ್ನಿ ಅವರನ್ನು ತೊರೆದು ಹೋಗಿದ್ದರು. ಹೋಗುವಾಗ ತಮ್ಮ ಜೊತೆ ಇಬ್ಬರು ಪುತ್ರಿಯರನ್ನು ಕರೆದುಕೊಂಡು ಹೋಗಿದ್ದರು ಎಂದು ಹೇಳಲಾಗಿದೆ.
ನಾಗೋಲೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಸೂರ್ಯ ನಾಯಕ್ ಮಾತನಾಡಿ, ರಮಣ ಮತ್ತು ಶಾಂತಿಕುಮಾರಿ ಇಬ್ಬರೂ 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಆಹಾರ ಮತ್ತು ನೀರಿಗಾಗಿ ಪ್ರಮೋದ ಅವರನ್ನು ಕರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಹಾರವಿಲ್ಲದೆ ಅವರ ಧ್ವನಿಗಳು ಕ್ಷೀಣವಾಗಿದ್ದವು. ಹೀಗಾಗಿ ಬಹುಶಃ ಅವರ ಅಕ್ಕಪಕ್ಕದವರಿಗೂ ಈ ದಂಪತಿ ಧ್ವನಿ ಕೇಳಲಿಲ್ಲ ಎಂದು ಅವರು ಹೇಳಿದರು. ಮನೆ ತಲುಪಿದಾಗ ರಮಣ ಮತ್ತು ಶಾಂತಿಕುಮಾರಿ ಅರೆಪ್ರಜ್ಞಾವಸ್ಥೆಯಲ್ಲಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ರಕ್ಷಿಸಿ ಆಹಾರ ಮತ್ತು ನೀರು ಕೊಡಲಾಯಿತು.
ನಾಲ್ಕೈದು ದಿನಗಳ ಹಿಂದೆ ಪ್ರಮೋದ ನಿದ್ದೆಯಲ್ಲಿಯೇ ಮೃತಪಟ್ಟಿದ್ದು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ನಾಯಕ್ ಹೇಳಿದ್ದಾರೆ. ನಗರದ ಇನ್ನೊಂದು ಭಾಗದಲ್ಲಿ ವಾಸವಾಗಿರುವ ರಮಣ ಮತ್ತು ಶಾಂತಿಕುಮಾರ ಅವರ ಹಿರಿಯ ಮಗ ಪ್ರದೀಪ ಅವರಿಗೆ ಮಾಹಿತಿ ನೀಡಲಾಗಿದ್ದು, ದಂಪತಿಯನ್ನು ಅವರ ಆರೈಕೆಗೆ ಒಪ್ಪಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ