ಮನ ಮಿಡಿಯುವ ಘಟನೆ ; ಮೃತ ಆನೆ ಕಳೆಬರಕ್ಕೆ ಗೌರವ ಸಲ್ಲಿಸಲು ದೂರದಿಂದ ಬಂದ ಆನೆಗಳ ದೊಡ್ಡ ಹಿಂಡು…!

ಚಿಕ್ಕಮಗಳೂರು : ಪ್ರಾಣಿಗಳಲ್ಲೂ ಭಾವನೆಗಳಿವೆ. ಅವು ಕಷ್ಟ, ಸುಖ, ದುಃಖಗಳಲ್ಲಿ ಒಂದಾಗುತ್ತವೆ. ತಮ್ಮ ಮೂಕ ಭಾಷೆಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಅದರಲ್ಲಿಯೂ ಆನೆಗಳು ಇನ್ನೂ ಹೆಚ್ಚು ಭಾವುಕ ಜೀವಿಗಳು. ಅವುಗಳು ಯಾವುದೇ ಆನೆಗಳು ಮೃತಪಟ್ಟರೂ ಅದರ ಕಳೆಬರ ಕಂಡರೆ ಅದಕ್ಕೆ ಗೌರವ ಸೂಚಿಸಿಯೇ ಮುಂದಕ್ಕೆ ಸಾಗುತ್ತವೆ ಎಂದು ಹೇಳಾಗುತ್ತಿದೆ. ಇಂಥದ್ದೇ ನಿದರ್ಶನ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಭದ್ರಾ ಅಭಯಾರಣ್ಯ ವ್ಯಾಪ್ತಿಯ ಮುತ್ತೋಡಿ ಹೆಬ್ಬೆ ವಲಯದಲ್ಲಿ ಕಾಡಾನೆಯೊಂದು ಮೃತಪಟ್ಟಿತ್ತು. ಆ ಮೃತ ಆನೆಯ ಕಳೇಬರ ನೋಡಲು ಬಹು ದೂರದಿಂದ ಆನೆಗಳ ಹಿಂಡೇ ಆಗಮಿಸಿ ಅಚ್ಚರಿ ಮೂಡಿಸಿವೆ. ಈ ಕಾಡಾನೆಗಳು ಮೃತ ಆನೆಯ ಕಳೇಬರದ ಸಮೀಪ ಕೆಲಹೊತ್ತು ಇದ್ದು ತೆರಳುತ್ತಿರುವ ದೃಶ್ಯ ಈಗ ಅರಣ್ಯ ಇಲಾಖೆ ಅಳವಡಿಸಿದ ಟ್ರ್ಯಾಪ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಾಡಾನೆ ಮೃತಪಟ್ಟಿದ್ದು ದೂರದಲ್ಲಿ ಇದ್ದ ಕಾಡಾನೆಗಳ ಹಿಂಡು ಆಗಮಿಸಿ ಆ ಕಳೇಬರದ ಸುತ್ತ ತಿರುಗುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಂದು ವಂಶದ ಆನೆಗಳು ವರ್ಷಕ್ಕೊಮ್ಮೆ ಒಂದು ಕಡೆ ಸೇರುತ್ತವೆಯಂತೆ. ಆನೆಗಳು ಮೃತಪಟ್ಟರೆ ಉಳಿದ ಆನೆಗಳು ಹುಡುಕಿಕೊಂಡು ಬರುತ್ತವೆಯಂತೆ. ಇಲ್ಲಿಯೂ ಅಂಥ ಘಟನೆ ಈಗ ಪುನರಾವರ್ತನೆಗೊಂಡಿದೆ.
ಭದ್ರಾ ಅಭಯಾರಣ್ಯದ ಮುತ್ತೋಡಿ ಹೆಬ್ಬೆ ವಲಯದಲ್ಲಿ ಫೆಬ್ರವರಿಯಲ್ಲಿ ಕಾಡಾನೆ ಮೃತಪಟ್ಟಿತ್ತು. ಅರಣ್ಯ ಇಲಾಖೆ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದೆ. ಅರಣ್ಯ ಕಾಯ್ದೆಯಂತೆ ಮೃತಪಟ್ಟ ಆನೆಯನ್ನು ಸುಡುವಂತಿಲ್ಲ. ಹಾಗೂ ಆನೆಯ ಮೃತ ಶರೀರವನ್ನು ಮಣ್ಣಲ್ಲಿ ಹೂಳುವಂತಿಲ್ಲ. ಹಾಗಾಗಿ ಕಳೇಬರವನ್ನು ಅರಣ್ಯದಲ್ಲಿ ಹಾಗೆಯೇ ಬಿಟ್ಟು ಬರಲಾಗಿತ್ತು.

ಪ್ರಮುಖ ಸುದ್ದಿ :-   ಬೆಂಗಳೂರು | ಟೆಕ್ಕಿ ನಂತರ ಹೆಂಡತಿ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್‌ ಕಾನ್‌ಸ್ಟೆಬಲ್...! ಡೆತ್​ನೋಟ್​ನಲ್ಲಿ ಕಿರುಕುಳದ ಆರೋಪ

ಆನೆಯ ಕಳೇಬರ ಯಾವ ರೀತಿ ಮತ್ತೆ ಮಣ್ಣು ಸೇರಲಿದೆ ? ಯಾವ ಪ್ರಾಣಿಗಳು ಕಳೇಬರವನ್ನು ಭಕ್ಷಿಸಲಿವೆ ಎಂಬ ಉದ್ದೇಶದಿಂದ ಇಲಾಖೆ ಟ್ರ್ಯಾಕ್‌ ಕ್ಯಾಮೆರಾ ಅಳವಡಿಸಿತ್ತು. ಇದೀಗ ಕ್ಯಾಮೆರಾ ಪರಿಶೀಲಿಸಿದಾಗ ಆನೆಯ ಕಳೇಬರ ಬಳಿ ಸುಮಾರು 17 ಕಾಡಾನೆಗಳು ಬಂದಿರುವುದು ಸೆರೆಯಾಗಿದೆ.
ಆನೆಗಳು ಮಾತನಾಡುವುದಿಲ್ಲ ನಿಜ. ಆದರೆ ಅವುಗಳು ಹೆಚ್ಚು ಭಾವುಕ ಜೀವಿಗಳು, ಬುದ್ಧಿವಂತ ಪ್ರಾಣಿಗಳು. ಇಲ್ಲಿಯೂ ಅದೇ ವ್ಯಕ್ತವಾಗಿದೆ.

5 / 5. 6

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement