ವಕ್ಫ್ ಭೂ ವಿವಾದ | ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಕಳವಳಕಾರಿ ; ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್

ಹುಬ್ಬಳ್ಳಿ: ಕರ್ನಾಟಕದಲ್ಲಿ ಧಾರ್ಮಿಕ ಸಂಸ್ಥೆಗಳು ಸೇರಿದಂತೆ ವಿವಿಧ ಆಸ್ತಿಗಳ ಮಾಲೀಕತ್ವವನ್ನು ವಕ್ಫ್ ಮಂಡಳಿಗೆ ಸೇರಿದ್ದು ಎಂದು ಹೇಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಮತ್ತು ಈ ವಿಷಯವನ್ನು ಜೆಪಿಸಿ ಮುಂದೆ ಇಡಲಾಗುವುದು ಎಂದು ಸಂಸದ ಮತ್ತು ವಕ್ಫ್ (ತಿದ್ದುಪಡಿ) ಮಸೂದೆ 2024ರ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ ಹೇಳಿದ್ದಾರೆ.
ಗುರುವಾರ (ನವೆಂಬರ್ 7) ಹುಬ್ಬಳ್ಳಿಯಲ್ಲಿ ರೈತರು ಮತ್ತು ಬಿಜೆಪಿ ಮುಖಂಡರ ಅಹವಾಲು ಆಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐತಿಹಾಸಿಕ ದೇವಾಲಯಗಳು ಮತ್ತು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಜಮೀನುಗಳನ್ನು ಸಹ ಯಾವುದೇ ನೋಟಿಸ್ ನೀಡದೆ ವಕ್ಫ್ ಆಸ್ತಿ ಎಂದು ಘೋಷಿಸಿರುವ ಬಗ್ಗೆ ವಿವಿಧ ಗುಂಪುಗಳಿಂದ ಜ್ಞಾಪನೆ ಸ್ವೀಕರಿಸಲಾಗಿದೆ.

“ಕರ್ನಾಟಕದಲ್ಲಿ ವಕ್ಫ್ ಬೋರ್ಡ್ ಆಸ್ತಿಗಳೆಂದು ಹೇಳಿಕೊಳ್ಳುವುದು ಮಾತ್ರವಲ್ಲದೆ ಮ್ಯುಟೇಶನ್‌ಗಳನ್ನು ಸಹ ಯಾವುದೇ ನೋಟಿಸ್ ನೀಡದೆ ಬದಲಾಯಿಸಲಾಗುತ್ತಿದೆ. ಅದು ಹೇಗೆ ಸಾಧ್ಯ? ಯಾರು ಹೊಣೆ? ಆಡಳಿತದ ಕೈವಾಡವಿಲ್ಲದೆ ಇಂತಹ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ನೋಟಿಸ್‌ಗಳನ್ನು ಹಿಂಪಡೆಯಲಾಗುವುದು ಮತ್ತು ರೈತರನ್ನು ಹೊರಹಾಕುವುದಿಲ್ಲ ಎಂಬ ಕರ್ನಾಟಕ ಸರ್ಕಾರದ ಘೋಷಣೆಯನ್ನು ಉಲ್ಲೇಖಿಸಿದ ಶ್ರೀ ಪಾಲ್, ಸರ್ಕಾರವು ಹೇಳಿಕೆ ನೀಡಿದ್ದರೂ, ಈಗಾಗಲೇ ಭೂ ದಾಖಲೆಗಳಲ್ಲಿ ಮ್ಯುಟೇಶನ್‌ಗಳನ್ನು ಮಾಡಲಾಗಿದೆ, ಇದು ಕಳವಳಕಾರಿ ಸಂಗತಿ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಬೆಂಗಳೂರು | ಟೆಕ್ಕಿ ನಂತರ ಹೆಂಡತಿ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್‌ ಕಾನ್‌ಸ್ಟೆಬಲ್...! ಡೆತ್​ನೋಟ್​ನಲ್ಲಿ ಕಿರುಕುಳದ ಆರೋಪ

ಜೆಪಿಸಿ ಸದಸ್ಯರೂ ಆಗಿರುವ ಸಂಸದ ತೇಜಸ್ವಿ ಸೂರ್ಯ ಅವರು ಕರ್ನಾಟಕದ ಬೆಳವಣಿಗೆಗಳನ್ನು ತಮ್ಮ ಗಮನಕ್ಕೆ ತಂದ ನಂತರ ನೊಂದ ರೈತರ ಅಹವಾಲು ಆಲಿಸಲು ಬಂದಿರುವುದಾಗಿ ಹೇಳಿದ ಜಗದಂಬಿಕಾ ಪಾಲ ಅವರು, ವಿವಿಧ ಗುಂಪುಗಳಿಂದ ಮತ್ತು ಕರ್ನಾಟಕ ವಿಧಾನಸಭೆಯ ವಿಪಕ್ಷದ ಉಪ ನಾಯಕರಾದ ಅರವಿಂದ ಬೆಲ್ಲದ, ಬಿಜೆಪಿಯ ಸತ್ಯಶೋಧನಾ ಸಮಿತಿಯಿಂದ ಸುಮಾರು 70 ಅಹವಾಲುಗಳನ್ನು ಸ್ವೀಕರಿಸಿದ್ದೇನೆ. ಅವರ ಅಹವಾಲುಗಳನ್ನು ಜೆಪಿಸಿ ಮುಂದೆ ಇಡಲಾಗುವುದು ಮತ್ತು ಅವರ ಕುಂದುಕೊರತೆಗಳ ಬಗ್ಗೆ ತಿಳಿಸಲು ಸಮಿತಿಯ ಮುಂದೆ ಹಾಜರಾಗಲು ಅವರನ್ನುಆಹ್ವಾನಿಸಲಾಗುವುದು ಎಂದು ಅವರು ಹೇಳಿದರು.
ಕರ್ನಾಟಕದ ಬೆಳವಣಿಗೆಗಳ ಹೊರತಾಗಿ, ವಕ್ಫ್ ಮಂಡಳಿಗೆ ಸಂಬಂಧಿಸಿದಂತೆ ಇತರ ವಿವಾದಾತ್ಮಕ ವಿಷಯಗಳಿವೆ. ಜೆಪಿಸಿ ಸದಸ್ಯರು ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಇತರ ಸ್ಥಳಗಳಿಗೆ ಭೇಟಿ ನೀಡಿದ್ದು, ಈ ವಿಷಯದ ಬಗ್ಗೆ ತಜ್ಞರು, ಮಂಡಳಿಯ ಸದಸ್ಯರು ಮತ್ತು ಸರ್ಕಾರಿ ಅಧಿಕಾರಿಗಳು ಸೇರಿದಂತೆ ವಿವಿಧ ಸ್ತರದವರಿಂದ ಅಹವಾಲು ಆಲಿಸಿದ್ದಾರೆ. ಜೆಪಿಸಿ ಸದಸ್ಯರು ಮುಂದಿನ ದಿನಗಳಲ್ಲಿ ಗುಹಾಹತಿ, ಪಾಟ್ನಾ, ಕೋಲ್ಕತ್ತಾ ಮತ್ತು ಇತರ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಡಿಸೆಂಬರ್ 17 ರಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ : ಮುನ್ಸೂಚನೆ

ರೈತರನ್ನು ಭೇಟಿ ಮಾಡುವುದು ಜೆಪಿಸಿಯ ಕೆಲಸವಲ್ಲ, ಇದು ಕಾನೂನುಬಾಹಿರ ಎಂಬ ಕರ್ನಾಟಕ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಜೆಪಿಸಿ ರಚನೆಯ ಸಂಪೂರ್ಣ ಉದ್ದೇಶವು ವಕ್ಫ್ ಬೋರ್ಡ್ ಮತ್ತು ಪ್ರಸ್ತಾವಿತ ತಿದ್ದುಪಡಿಗಳಿಗೆ ಸಂಬಂಧಿಸಿದ ವಿವಾದಾತ್ಮಕ ವಿಷಯಗಳಲ್ಲಿ ಮಧ್ಯಸ್ಥಗಾರರನ್ನು ಆಲಿಸುವುದಾಗಿದೆ. ಅಂತಿಮವಾಗಿ, ಪ್ರತಿಯೊಂದು ಅಂಶವನ್ನು ಅಧ್ಯಯನ ಮಾಡುವುದು ಮತ್ತು ಸಮಗ್ರ ವರದಿಯನ್ನು ಸಲ್ಲಿಸುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದರು.
ಜೆಪಿಸಿಯ ಇತರ ಎಲ್ಲ ಸದಸ್ಯರೊಂದಿಗೆ ರೈತರನ್ನು ಭೇಟಿ ಮಾಡಬೇಕಿತ್ತು ಎಂಬ ಮತ್ತೊಂದು ಪ್ರಶ್ನೆಗೆ, ಅವರು ಜೆಪಿಸಿ ಮುಂದೆ ಈ ಎಲ್ಲ ಅಹವಾಲುಗಳನ್ನು ಇಡುವುದರಿಂದ ಅದರ ಅಗತ್ಯವಿಲ್ಲ ಎಂದು ಹೇಳಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement