ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸುಗಾವಿಯ ಸುತ್ತಮುತ್ತ ಚಿರತೆಗಳು ಓಡಾಡುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಮೊದಲೆಲ್ಲ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಈಗ ಪದೇಪದೇ ಕಾಣಿಸಿಕೊಳ್ಳುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಗುರುವಾರ ಸುಗಾವಿ ಸಮೀಪದ ಓಣೀಕೇರಿ ಹೈಸ್ಕೂಲ್ ಬಳಿ ಹಾಗೂ ಸಮೀಪದ ಬಿದ್ರಳ್ಳಿ ಸೇತುವೆ ಹಾಗೂ ದೇವಸ್ಥಾನದ ಬಳಿ ಒಂದೇ ದಿನ ಎರಡು ಸ್ಥಳಗಳಲ್ಲಿ ಚಿರತೆಗಳು ಕಾಣಿಸಿಕೊಂಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಲ್ಲದೆ ಚಿರತೆಗಳ ಓಡಾಟ ಅವರ ಮೊಬೈಲ್ ಕ್ಯಾಮರಾದಲ್ಲೂ ಸೆರೆಯಾಗಿವೆ.
ಗುರುವಾರ ಅಪರಾಹ್ನ ಓಣೀಕೇರಿ ಹೈಸ್ಕೂಲ್ ಬಳಿ ಕೆಲವರಿಗೆ ಚಿರತೆ ಕಾಣಿಸಿಕೊಂಡಿದೆ. ಈ ಬಗ್ಗೆ ಮಾಹಿತಿ ತಿಳಿದ ಕೆಲವರು ಅದನ್ನು ಹುಡುಕಾಡಿದ್ದಾರೆ. ಆದರೆ ಅದು ಅಲ್ಲಿಂದ ನಾಪತ್ತೆಯಾಗಿದೆ. ಆದರೆ ಅದೇ ದಿನ ರಾತ್ರಿ ಚಿರತೆ ಬಿದ್ರಳ್ಳಿ ದೇವಸ್ಥಾನ ಹಾಗೂ ಸೇತುವೆ ಬಳಿ ಮತ್ತೆ ಕಾಣಿಸಿಕೊಂಡಿದೆ. ಕಾರಿನಲ್ಲಿ ಹೋಗುತ್ತಿದ್ದಾಗ ಚಿರತೆ ಕಾಣಿಸಿಕೊಂಡಿದ್ದು, ಕಾರಿನಲ್ಲಿದ್ದವರು ಮೊಬೈಲ್‌ನಲ್ಲಿ ಚಿರತೆ ಓಡಾಡುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಚಿರತೆ ಕಾಣಿಸಿಕೊಂಡಿರುವುದು ಹಲವರ ಆತಂಕಕ್ಕೂ ಕಾರಣವಾಗಿದೆ. ವಿಶೇಷವಾಗಿ ದಾರಿಹೋಕರಿಗೆ ಹಾಗೂ ಬೈಕ್‌ನಲ್ಲಿ ತೆರಳುವವರಿಗೆ ಚಿರತೆ ಬಗ್ಗೆ ಆತಂಕ ಹೆಚ್ಚಿದೆ. ಯಾಕೆಂದರೆ ಹೋಗುತ್ತಿರುವಾಗ ಥಟ್ಟನೆ ಚಿರತೆ ಎದುರಾದರೆ ಏನು ಮಾಡುವುದು ಎಂಬ ಆತಂಕ ಅವರನ್ನು ಕಾಡುತ್ತಿದೆ. ಇನ್ನು ಹಲವರು ತಮ್ಮ ದನ ಕರುಗಳ ಬಗ್ಗೆ ಚಿಂತಿತರಾಗಿದ್ದಾರೆ.
ಸ್ಥಳೀಯರ ಪ್ರಕಾರ, ಓಣಿಕೇರಿ ಹೈಸ್ಕೂಲು ಬಳಿ ಕಾಣಿಸಿಕೊಂಡಿದ್ದ ಚಿರತೆ ಹಾಗೂ ಬಿದ್ರಳ್ಳಿ ದೇವಸ್ಥಾನದ ಬಳಿ ಕಾಣಿಸಕೊಂಡಿರುವ ಚಿರತೆ ಬೇರೆ ಬೇರೆ. ಯಾಕೆಂದರೆ ಅವರ ಪ್ರಕಾರ ಈ ಚಿರತೆಗಳ ಗಾತ್ರ ಹಾಗೂ ಆಕಾರಗಳಲ್ಲಿ ವ್ಯತ್ಯಾಸವಿದೆ. ಹೀಗಾಗಿ ಈ ಭಾಗದಲ್ಲಿ ಮೂರ್ನಾಲ್ಕು ಚಿರತೆಗಳು ಇರಬಹುದು ಎಂದು ಸ್ಥಳೀಯರು ಹೇಳುತ್ತಾರೆ.
ಚಿರತೆಗೆ ಕಾಡಿನಲ್ಲಿ ಆಹಾರದ ಕೊರತೆಯೋ, ನೀರಿನ ಕೊರತೆಯೋ ಅಥವಾ ಮತ್ತಿನ್ನೇನು ಸಮಸ್ಯೆಯೋ ಏನೋ..? ಇತ್ತೀಚಿನ ದಿನಗಳಲ್ಲಿ ಚಿರತೆಗಳು ಊರಿನ ಸಮೀಪ ಆಗಾಗ್ಗಾ ಕಾಣಿಸಿಕೊಳ್ಳುತ್ತಿವೆ, ಜನರ ಕಣ್ಣಿಗೆ ಬೀಳುತ್ತಿವೆ. ಹೀಗಾಗಿ ಜನರು ಆತಂಕಿತರಾಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ