ಬೆಂಗಳೂರು: ವಕ್ಫ್ ಆಸ್ತಿ ವಿವಾದ(Waqf Board land row) ರಾಜ್ಯದಲ್ಲಿ ಭುಗಿಲೆದ್ದ ನಂತರ ರಾಜ್ಯ ಸರ್ಕಾರ ರೈತರಿಗೆ ನೀಡಿದ್ದ ನೋಟಿಸ್ ಅನ್ನು ಅಧಿಕೃತವಾಗಿ ವಾಪಸ್ ಪಡೆದುಕೊಂಡಿದೆ. ಈ ಸಂಬಂಧ ಅಧಿಕೃತ ಆದೇಶ ಹೊರಬಿದ್ದಿದೆ.
ಆರಂಭದಲ್ಲಿ ರೈತರ ಜಮೀನಿನಿಂದ ಆರಂಭವಾದ ಈ ವಕ್ಫ್ ಆಸ್ತಿ ವಿವಾದ ಬಳಿಕ ಮಠಕ್ಕೆ ಹಾಗೂ ಹಿಂದೂ ದೇವಾಲಯಗಳಿಗೂ ನೋಟಿಸ್ ನೀಡುವ ಮೂಲಕ ಆತಂಕ ಹೆಚ್ಚಿಸಿತ್ತು. ಸದ್ಯ ಇದಾದ ಬಳಿಕ ರಾಜ್ಯದಲ್ಲಿ ರೈತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಎಚ್ಚೆತ್ತುಕೊಂಡಿರುವ ಸರ್ಕಾರ ರೈತರಿಗೆ ನೀಡಿದ್ದ ನೋಟಿಸ್ ಅನ್ನು ಅಧಿಕೃತವಾಗಿ ವಾಪಸ್ ಪಡೆದುಕೊಂಡಿದೆ.
ವಕ್ಫ್ ಸಂಬಂಧ ರೈತರಿಗೆ ನೀಡಿರುವ ಎಲ್ಲಾ ನೋಟಿಸುಗಳನ್ನು ಹಿಂಪಡೆಯಬೇಕು. ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿರುವ ರೈತರ ವಿರುದ್ಧ ಯಾವುದೇ ಕ್ರಮವನ್ನು ಜರುಗಿಸಬಾರದು ಎಂದು ರಾಜ್ಯದ ಎಲ್ಲಾ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಆದೇಶ ಹೊರಡಿಸಿದೆ. ಕೆಲ ರೈತರ ಹಾಗೂ ಇತರ ಆಸ್ತಿಗಳನ್ನು ವಕ್ಫ್ ಹೆಸರಿಗೆ ಖಾತೆ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಮ್ಯುಟೇಷನ್ ಮಾಡಲು ಯಾವುದೇ ಕಚೇರಿ ಅಥವಾ ಯಾವುದೇ ಪ್ರಾಧಿಕಾರ ನೀಡಿದ ನಿರ್ದೇಶನಗಳನ್ನು ತಕ್ಷಣ ಹಿಂಪಡೆಯಬೇಕು. ಜೊತೆಗೆ ಮ್ಯುಟೇಷನ್ ಪ್ರಕ್ರಿಯೆ ಕೂಡಲೇ ಸ್ಥಗಿತಗೊಳಿಸಬೇಕು. ಮುಖ್ಯಮಂತ್ರಿಗಳ ಆದೇಶವಿದ್ದಾಗಲೂ ಮೇಲಧಿಕಾರಿಗಳ ಅನುಮತಿ ಇಲ್ಲದೆ ಸುತ್ತೋಲೆ ಹೊರಡಿಸಿದ ಅಧಿಕಾರಿ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ