ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಂಧನ

ನವದೆಹಲಿ : ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಮೂವರು ಶೂಟರ್‌ಗಳ ಪೈಕಿ ಒಬ್ಬನಾದ ಶಿವಕುಮಾರ ಗೌತಮ ಎಂಬಾತನನ್ನು ಭಾನುವಾರ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಬಂಧಿಸಲಾಗಿದೆ.
ಈತ ನೇಪಾಳಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಶಿವಕುಮಾರಗೆ ಆಶ್ರಯ ನೀಡಿ ನೇಪಾಳಕ್ಕೆ ಪರಾರಿಯಾಗಲು ಸಹಾಯ ಮಾಡಿದ್ದಕ್ಕಾಗಿ ಇತರ ನಾಲ್ವರನ್ನು ಬಂಧಿಸಲಾಗಿದೆ. ಅದಕ್ಕೂ ಮೊದಲು, ಇಬ್ಬರು ಶೂಟರ್‌ಗಳು ಸೇರಿದಂತೆ 20 ಜನರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು.
ಅಕ್ಟೋಬರ್ 12 ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ 66 ವರ್ಷದ ಸಿದ್ದಿಕಿ ಅವರನ್ನು ಮೂವರು ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಮಾಜಿ ಸಚಿವರ ಹತ್ಯೆಯ ನಂತರ ಪರಾರಿಯಾಗಿದ್ದ ಶಿವಕುಮಾರ ಉತ್ತರ ಪ್ರದೇಶ ಮತ್ತು ಮುಂಬೈ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಹ್ರೈಚ್‌ನ ನಾನ್‌ಪಾರಾ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾನೆ. ಶಿವಕುಮಾರ, ಮೂವರು ಶೂಟರ್‌ಗಳಲ್ಲಿ ಒಬ್ಬ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿಯಾಗಿದ್ದಾನೆ. ಗ್ಯಾಂಗ್‌ನಿಂದ ಎಲ್ಲಾ ಸೂಚನೆಗಳನ್ನು ಅವನ ಮೂಲಕ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ತನಗೆ ನಂಟು ಇದೆ ಎಂದು ಶಿವಕುಮಾರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೆನಡಾದಲ್ಲಿ ವಾಸಿಸುತ್ತಿದ್ದಾನೆ ಎಂದು ನಂಬಲಾದ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಸೂಚನೆಯ ಮೇರೆಗೆ ಈ ಕೊಲೆಯನ್ನು ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
2022 ರಲ್ಲಿ ಪಂಜಾಬಿ ಗಾಯಕ-ರಾಜಕಾರಣಿ ಸಿಧು ಮೂಸೆವಾಲಾ ಅವರ ಹತ್ಯೆ ಮತ್ತು ಏಪ್ರಿಲ್‌ನಲ್ಲಿ ಮುಂಬೈನಲ್ಲಿರುವ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಅನ್ಮೋಲ್ ಬಿಷ್ಣೋಯ್ ಹೆಸರು ಕೇಳಿಬಂದಿದೆ. ಈತ ರಾಷ್ಟ್ರೀಯ ತನಿಖಾ ಸಂಸ್ಥೆಯ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದು, ಆತನ ಬಂಧನಕ್ಕೆ ₹ 10 ಲಕ್ಷ ಬಹುಮಾನ ಘೋಷಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement