ನವದೆಹಲಿ: ಸುಪ್ರೀಂ ಕೋರ್ಟ್ 51ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ನ್ಯಾಯಮೂರ್ತಿ ಸಂಜೀವ ಖನ್ನಾ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಖನ್ನಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ನ್ಯಾಯಮೂರ್ತಿ ಖನ್ನಾ ಅವರು ಸಿಜೆಐ ಆಗಿ 183 ದಿನಗಳ ಕಾಲ (ಸುಮಾರು ಆರು ತಿಂಗಳು) ಸೇವೆ ಸಲ್ಲಿಸಲಿದ್ದಾರೆ. ಅವರು 2025ರ ಮೇ 13ರಂದು ನಿವೃತ್ತರಾಗಲಿದ್ದಾರೆ. ತೆರಿಗೆ, ಸಾಂವಿಧಾನಿಕ ಕಾನೂನು, ಮಧ್ಯಸ್ಥಿಕೆ, ವಾಣಿಜ್ಯ, ಪರಿಸರ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಖನ್ನಾ ಅವರು ಪರಿಣತರಾಗಿದ್ದಾರೆ.
ಅವರು 1983ರಲ್ಲಿ ವಕೀಲಿಕೆ ಆರಂಭಿಸಿದರು. ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸ್ಥಾಯಿ ಸಲಹೆಗಾರರಾಗಿ (ಸಿವಿಲ್) 2004ರಲ್ಲಿ ಅವರು ನೇಮಕಗೊಂಡರು. 2005ರಲ್ಲಿ ದೆಹಲಿ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು ಒಂದು ವರ್ಷದ ನಂತರ ಕಾಯಂ ನ್ಯಾಯಮೂರ್ತಿಯಾದರು.
ಅವರು ಜನವರಿ 18, 2019 ರಂದು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಅವರು ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ನ್ಯಾ. ಖನ್ನಾ ಅವರು ಸಂವಿಧಾನದ 370ನೇ ವಿಧಿ ರದ್ದತಿ ಎತ್ತಿಹಿಡಿದ ಸಾಂವಿಧಾನಿಕ ಪೀಠದ ಭಾಗವಾಗಿದ್ದರು. ರಾಜಕೀಯ ಪಕ್ಷಗಳಿಗೆ ಅನಾಮಧೇಯ ದೇಣಿಗೆ ನೀಡಲು ಅವಕಾಶ ಕಲ್ಪಿಸುವ ಚುನಾವಣಾ ಬಾಂಡ್ ಯೋಜನೆ ರದ್ದುಪಡಿಸಿದ ಸಾಂವಿಧಾನಿಕ ಪೀಠದಲ್ಲಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ