ಮುಂಬೈ: ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಮಾಹಿತಿ ಹೊರಬಿದ್ದಿದೆ. ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ ಗೌತಮ ಎಂಬಾತ ಸಿದ್ದಿಕಿ ಅವರ ಮೇಲೆ ಗುಂಡು ಹಾರಿಸಿದ ನಂತರ ಅವರನ್ನು ಕರೆದೊಯ್ಯಲಾದ ಲೀಲಾವತಿ ಆಸ್ಪತ್ರೆಯ ಹೊರಗೆ ನಿಂತು ಸಿದ್ದಿಕಿ ಸಾವಿಗೀಡಾಗಿದ್ದಾರೆಯೇ ಅಥವಾ ಬದುಕುಳಿದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಅರ್ಧ ಗಂಟೆ ಕಾಲ ನಿಂತಿದ್ದ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
ಗುಂಡಿನ ದಾಳಿಯ ನಂತರ ತನ್ನ ಅಂಗಿಯನ್ನು ತ್ವರಿತವಾಗಿ ಬದಲಾಯಿಸಿದ ಶೂಟರ್, ತಾನು ಆಸ್ಪತ್ರೆಯ ಹೊರಗೆ 30 ನಿಮಿಷಗಳ ಕಾಲ ಗುಂಪಿನ ನಡುವೆ ನಿಂತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಸಿದ್ದಿಕಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದ ಕೂಡಲೇ ತಾನು ಅಲ್ಲಿಂದ ತೆರಳಿರುವುದಾಗಿ ಆತ ವಿಚಾರಣೆ ವೇಳೆ ಬಾಯಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಕ್ಟೋಬರ್ 12 ರಂದು ರಾತ್ರಿ 9:11 ಕ್ಕೆ ಮುಂಬೈನ ಬಾಂದ್ರಾದಲ್ಲಿ ಎನ್‌ಸಿಪಿ ನಾಯಕ (ಅಜಿತ ಪವಾರ್ ಬಣ) 66 ವರ್ಷದ ಸಿದ್ದಿಕಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಎದೆಗೆ ಎರಡು ಗುಂಡು ತಗುಲಿದ್ದ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಆರೋಪಿಗಳ ಪ್ರಕಾರ, ಆರಂಭಿಕ ಯೋಜನೆಯಂತೆ ಅವರು ತಮ್ಮ ಸಹಾಯಕರಾದ ಧರ್ಮರಾಜ ಕಶ್ಯಪ ಮತ್ತು ಗುರ್ಮೈಲ್ ಸಿಂಗ್ ಅವರನ್ನು ಉಜ್ಜಯಿನಿ ರೈಲು ನಿಲ್ದಾಣದಲ್ಲಿ ಭೇಟಿಯಾಗಬೇಕಿತ್ತು. ಅಲ್ಲಿ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನೊಬ್ಬ ಅವರನ್ನು ವೈಷ್ಣೋ ದೇವಿಗೆ ಕರೆದೊಯ್ಯಬೇಕಿತ್ತು. ಆದರೆ, ಕಶ್ಯಪ ಮತ್ತು ಸಿಂಗ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದರಿಂದ ಯೋಜನೆ ವಿಫಲವಾಯಿತು.
ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಹೇಗೆ…?
ಪ್ರಮುಖ ಆರೋಪಿಯ ನಾಲ್ವರು ಸ್ನೇಹಿತರು, ಮೊಬೈಲ್ ಫೋನ್‌ಗಳಲ್ಲಿ ನಡೆಸಿದ ತಡರಾತ್ರಿಯ ಸಂಭಾಷಣೆಗಳು ಅನುಮಾನಕ್ಕೆ ಕಾರಣವಾದವು. ಮುಂಬೈ ಪೊಲೀಸರಿಂದ ಭಾನುವಾರ ಬಂಧಿಸಲ್ಪಟ್ಟ ಶಿವಕುಮಾರ ಗೌತಮ ಎಂಬಾತನನ್ನು ಬಂಧಿಸಲು ನಾಲ್ವರು ಆರೋಪಿಗಳ ಸಂಭಾಷಣೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಮುಂಬೈ ಕ್ರೈಂ ಬ್ರಾಂಚ್ ಮತ್ತು ಉತ್ತರ ಪ್ರದೇಶ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಗೌತಮ ಜೊತೆಗೆ ಅನುರಾಗ್ ಕಶ್ಯಪ, ಜ್ಞಾನ ಪ್ರಕಾಶ ತ್ರಿಪಾಠಿ, ಆಕಾಶ್ ಶ್ರೀವಾಸ್ತವ ಮತ್ತು ಅಖಿಲೇಂದ್ರ ಪ್ರತಾಪ್ ಸಿಂಗ್ ಅವರನ್ನು ನೇಪಾಳ ಗಡಿಯ ಬಳಿ ಬಂಧಿಸಿದೆ. ನಾಲ್ವರು ಸಹಾಯಕರು ಪ್ರಮುಖ ಆರೋಪಿಗೆ ದೇಶದಿಂದ ಪರಾರಿಯಾಗಲು ಸಹಾಯ ಮಾಡಲು ಯೋಜಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡು ಹಾರಿಸಿದ ನಂತರ ಗೌತಮ, ಅಪರಾಧದ ಸ್ಥಳದಿಂದ ಕುರ್ಲಾಗೆ ಹೋದ, ಥಾಣೆಗೆ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಿದ ಮತ್ತು ನಂತರ ಪುಣೆಗೆ ಪರಾರಿಯಾದ,- ಅಲ್ಲಿ ಆತ ತನ್ನ ಮೊಬೈಲ್ ಫೋನ್ ಅನ್ನು ಎಸೆದ ಎಂದು ವರದಿಯಾಗಿದೆ. ಸುಮಾರು ಏಳು ದಿನಗಳ ಕಾಲ ಪುಣೆಯಲ್ಲಿ ತಂಗಿದ್ದ ಆತ ಉತ್ತರ ಪ್ರದೇಶದ ಝಾನ್ಸಿ ಮತ್ತು ಲಕ್ನೋಗೆ ಪ್ರಯಾಣ ಬೆಳೆಸಿದ್ದಾನೆ. ಭಾನುವಾರ, ಗೌತಮ ಉತ್ತರ ಪ್ರದೇಶದ ನಾನ್ಪಾರಾ ಪಟ್ಟಣದಿಂದ 10 ಕಿಮೀ ದೂರದಲ್ಲಿರುವ 10 ರಿಂದ 15 ಗುಡಿಸಲುಗಳಿರುವ ಕುಗ್ರಾಮದಲ್ಲಿ ಅಡಗಿಕೊಂಡಿರುವುದು ಪತ್ತೆಯಾಯಾಯಿತು. ಅಲ್ಲಿಂದ ಬಂಧಿಸಿ ಮುಂಬೈಗೆ ಕರೆತರಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ