ನೋಯ್ಡಾ : ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದರಲ್ಲಿ ಗ್ರೇಟರ್ ನೋಯ್ಡಾದ ಆಸ್ಪತ್ರೆಯೊಂದರಲ್ಲಿ ಎಡಗಣ್ಣಿನ ಶಸ್ತ್ರಚಿಕಿತ್ಸೆಗೆ ಹೋದ ಏಳು ವರ್ಷದ ಬಾಲಕನ ಬಲಗಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವರದಿಯಾಗಿದೆ.
ನವೆಂಬರ್ 12 ರಂದು ಸೆಕ್ಟರ್ ಗಾಮಾ 1 ರ ಆನಂದ್ ಸ್ಪೆಕ್ಟ್ರಮ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಬಾಲಕನ ತಂದೆ ನಿತಿನ್ ಭಾಟಿ ಪ್ರಕಾರ, ಎಡಗಣ್ಣಿನಿಂದ ಆಗಾಗ್ಗೆ ನೀರು ಬರುತ್ತಿದ್ದರಿಂದ ಅವರು ಮಗನನ್ನು ಆಸ್ಪತ್ರೆಗೆ ಕರೆದೊಯ್ದರು. ತಪಾಸಣೆಯ ನಂತರ, ವೈದ್ಯರು, ಬಾಲಕನ ಕಣ್ಣಿನಲ್ಲಿ ಪ್ಲಾಸ್ಟಿಕ್ ತರಹದ ವಸ್ತುವಿದೆ. ಅದನ್ನು ಆಪರೇಷನ್ ಮೂಲಕ ಗುಣಪಡಿಸಬಹುದು ಎಂದು ಹೇಳಿದ್ದಾರೆ.ಶಸ್ತ್ರಚಿಕಿತ್ಸೆಗೆ ₹ 45,000 ವೆಚ್ಚವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯರು ಮಂಗಳವಾರ ಬಾಲಕ ಯುಧಿಷ್ಠರ್ ಎಂಬಾತನಿಗೆ ಆಪರೇಷನ್ ಮಾಡಿದ್ದಾರೆ. ಮನೆಗೆ ತಲುಪಿದಾಗ, ಹುಡುಗನ ತಾಯಿ ತೊಂದರೆ ಇರುವ ಕಣ್ಣನ್ನು ಬಿಟ್ಟು ಬೇರೆ ಕಣ್ಣು ಆಪರೇಷನ್ ಮಾಡಿರುವುದನ್ನು ಗಮನಿಸಿದ್ದಾರೆ. ಇದನ್ನು ಅನುಸರಿಸಿ, ಪೋಷಕರು ವೈದ್ಯರನ್ನುಭೇಟಿ ಮಾಡಿದ್ದಾರೆ. ಆದರೆ ಅವರು ಮತ್ತು ಅವರ ಸಿಬ್ಬಂದಿ ಪೋಷಕರೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬವು ಗೌತಮ ಬುದ್ಧ ನಗರದ ಮುಖ್ಯ ವೈದ್ಯಕೀಯ ಅಧಿಕಾರಿ (CMO)ಗೆ ದೂರು ಸಲ್ಲಿಸಿತು. ಬಾಲಕನ ತಂದೆ ತಮ್ಮ ದೂರಿನಲ್ಲಿ ವೈದ್ಯರ ಪರವಾನಿಗೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ ಮತ್ತು ಆಸ್ಪತ್ರೆ ಸೀಜ್ ಮಾಡುವಂತೆ ಒತ್ತಾಯಿಸಿದ್ದಾರೆ. ತನಿಖೆ ಆರಂಭವಾಗಿದ್ದು, ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ