ಭೋಪಾಲ್ : ತಡರಾತ್ರಿ ಪಿಜ್ಜಾ ನೀಡಲು ಸಿಬ್ಬಂದಿ ನಿರಾಕರಿಸಿದ ಕಾರಣ ರೌಡಿಯೊಬ್ಬ ಕೆಫೆಯ ಪ್ರವೇಶ ದ್ವಾರದಲ್ಲಿ ಗುಂಡಿನ ದಾಳಿ ನಡೆಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬುಧವಾರ ನಡೆದಿದೆ ಎಂದು ವರದಿಯಾಗಿದೆ.
ಈ ವೇಳೆ ಕೆಲವೇ ಜನರಿದ್ದರು ಮತ್ತು ಕೆಫೆ ಮುಚ್ಚುವ ಸಮಯದಲ್ಲಿ ಕೆಫೆಗೆ ಇಬ್ಬರು ಯುವಕರು ನುಗ್ಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅವರಲ್ಲಿ ಒಬ್ಬ ಕೈಯಲ್ಲಿ ಕಪ್ಪು ಬಂದೂಕನ್ನು ಹಿಡಿದಿರುವುದನ್ನು ಕಾಣಬಹುದು. ಆತ ಕೌಂಟರ್ ಹತ್ತಿರ ಬಂದು ಆರ್ಡರ್ ಮಾಡಿದ್ದಾನೆ. ಪಿಜ್ಜಾ ಕೆಫೆ ಮುಚ್ಚುವ ಸಮಯವಾಗಿದ್ದರಿಂದ ಸಿಬ್ಬಂದಿ ಕಿಚನ್ ರೂಂ ಈಗಾಗಲೇ ಮುಚ್ಚಿದೆ ಎಂದು ಹೇಳಿ ಸಿಬ್ಬಂದಿ ಯಾವುದೇ ಆರ್ಡರ್ ತೆಗೆದುಕೊಂಡಿಲ್ಲ. ನಂತರ ಬಂದೂಕು ಹಿಡಿದ ಯುವಕ ಕೆಫೆಟೇರಿಯಾದ ಬಾಗಿಲಿಗೆ ಗುಂಡು ಹಾರಿಸಿದ್ದಾನೆ.
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಫೆ ಸಿಬ್ಬಂದಿ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ಮಾಹಿತಿಯ ಪ್ರಕಾರ, ಗ್ವಾಲಿಯರ್‌ನ ಐಷಾರಾಮಿ ಪಟೇಲ್ ನಗರದಲ್ಲಿರುವ ಕೆಫೆಟೇರಿಯಾದಲ್ಲಿ ಈ ಘಟನೆ ವರದಿಯಾಗಿದೆ. ಬುಧವಾರ ರಾತ್ರಿ ನೌಕರರು ತಮ್ಮ ಕೆಫೆಯನ್ನು ಮುಚ್ಚುತ್ತಿದ್ದಾಗ ಇಬ್ಬರು ಯುವಕರು ಬಂದು ಪಿಜ್ಜಾ ಆರ್ಡರ್ ಮಾಡಿದ್ದಾರೆ. ಅಡುಗೆ ಕೋಣೆ ಮುಚ್ಚಿದೆ ಎಂದು ಸಿಬ್ಬಂದಿಯೊಬ್ಬರು ಹೇಳಿದಾಗ ವಾಗ್ವಾದ ನಡೆದಿದೆ.
ನಂತರ ಒಬ್ಬ ಕಾರಿನತ್ತ ತೆರಳಿ ಅಲ್ಲಿದ್ದ ಬಂದೂಕು ತೆಗೆದುಕೊಂಡು ಬಂದಿದ್ದಾನೆ. ನಂತರ ಸಿಬ್ಬಂದಿ ಬೆದರಿಸಲು ಎರಡು ಗುಂಡು ಹಾರಿಸಿದ್ದಾನೆ. ಪಿಜ್ಜಾ ನೀಡುವಂತೆ ನೌಕರರಿಗೆ ಬೆದರಿಕೆ ಹಾಕಿದ್ದಾನೆ. ಬಂದೂಕು ತೋರಿಸಿ ಪಿಜ್ಜಾ ನೀಡುವಂತೆ ಬೆದರಿಸಿ, ಪಿಜ್ಜಾ ಮಾಡಿಸಿಕೊಂಡು ತಿಂದ ನಂತರ ಇಬ್ಬರು ಪರಾರಿಯಾಗಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಶಂಕಿತರ ಕೃತ್ಯಗಳು ದಾಖಲಾಗಿವೆ. ಕೆಫೆ ಉದ್ಯೋಗಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ವಿಶ್ವವಿದ್ಯಾನಿಲಯ ಪೊಲೀಸ್ ಠಾಣೆಯಲ್ಲಿ ಇಬ್ಬರು ಅಪರಿಚಿತ ಶಂಕಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲೇ ಅವರನ್ನು ಬಂಧಿಸುವುದಾಗಿ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ