ಕಾರಿನ ಮೇಲೆ ಕಲ್ಲು ತೂರಾಟ : ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ ದೇಶಮುಖಗೆ ಗಂಭೀರ ಗಾಯ

ನಾಗ್ಪುರ : ನಾಗ್ಪುರ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಮತ್ತು ಎನ್‌ಸಿಪಿ (ಶರದ್‌ ಪವಾರ್‌ ಬಣ) ನಾಯಕ ಅನಿಲ್ ದೇಶಮುಖ್ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದ್ದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ದೇಶಮುಖ್ ಅವರು ನಾರ್ಖೇಡ್ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಕಟೋಲ್‌ಗೆ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಕಟೋಲ್ ಸಮೀಪದ ಜಲಖೇಡ ರಸ್ತೆಯ ಬೆಲ್ಫಾಟಾ ಬಳಿ ಕೆಲವು ಅಪರಿಚಿತ ವ್ಯಕ್ತಿಗಳು ದೇಶಮುಖ್ ಅವರ ಕಾರಿಗೆ ಕಲ್ಲು ಎಸೆದಿದ್ದಾರೆ. ದಾಳಿಯ ವೇಳೆ ಗಾಯಗೊಂಡ ದೇಶಮುಖ್ ಅವರನ್ನು ತಕ್ಷಣವೇ ಕಟೋಲ್ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ನಾಗ್ಪುರ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಹರ್ಷ ಪೊದ್ದಾರ್ ಅವರು ಘಟನೆಯನ್ನು ಖಚಿತಪಡಿಸಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ತನಿಖೆ ಆರಂಭವಾಗಿದೆ. ದಾಳಿಗೆ ಕಾರಣರಾದವರನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಾರಿನ ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದ ಅನಿಲ್ ದೇಶಮುಖ್ ಅವರ ತಲೆಯಿಂದ ರಕ್ತ ಸೋರುತ್ತಿತ್ತು. ಅವರ ಬಿಳಿ ಕುರ್ತಾದ ಮೇಲೆಲ್ಲ ರಕ್ತದ ಕಲೆಗಳನ್ನು ವೀಡಿಯೊ ತೋರಿಸಿದೆ. ನಾಗ್ಪುರದ ಅಲೆಕ್ಸಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎನ್‌ಸಿಪಿ ದಾಳಿಯನ್ನು ಖಂಡಿಸಿದೆ ಮತ್ತು ಇದು ರಾಜ್ಯದಲ್ಲಿ “ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ವೈಫಲ್ಯ” ಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದೆ.”…ಪ್ರಜಾಪ್ರಭುತ್ವ ನಾಶವಾಗುತ್ತಿದೆ. ಇದಕ್ಕೆ ಉದಾಹರಣೆ ರಾಜ್ಯದ ಮಾಜಿ ಗೃಹ ಸಚಿವ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಅನಿಲ್ ದೇಶಮುಖ್ ಅವರ ಮೇಲೆ ಚುನಾವಣಾ ಸಭೆ ಮುಗಿಸಿ ಮನೆಗೆ ಮರಳುತ್ತಿದ್ದಾಗ ಹೇಡಿಗಳ ದಾಳಿಯ ರೂಪದಲ್ಲಿ ಹೊರಬಂದಿದೆ ಎಂದು ಎನ್‌ಸಿಪಿ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ದೇಶಮುಖ್ ಅವರ ತಲೆಯ ಮೇಲಿನ ಗಾಯದಿಂದ ರಕ್ತ ಸೋರುತ್ತಿರುವುದನ್ನು ತೋರಿಸುವ ವೀಡಿಯೊದೊಂದಿಗೆ ಹಂಚಿಕೊಂಡ ಪೋಸ್ಟ್‌ ನಲ್ಲಿ ಬರೆದಿದೆ.
ನವೆಂಬರ್ 20 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಚಾರದ ಕೊನೆಯ ದಿನದಂದು ಈ ಘಟನೆ ಸಂಭವಿಸಿದೆ. ದೇಶಮುಖ್ ಅವರ ಪುತ್ರ ಸಲೀಲ್ ದೇಶಮುಖ್ ಅವರು ಬಿಜೆಪಿಯ ಚರಣಸಿಂಗ್ ಠಾಕೂರ್ ವಿರುದ್ಧ ಕಟೋಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ವಂದೇ ಭಾರತ ರೈಲಿನಲ್ಲಿ ಬಿಜೆಪಿ ಶಾಸಕನ ಜೊತೆ ತನ್ನ ಸೀಟು ಬದಲಾಯಿಸಿಕೊಳ್ಳಲು ಒಪ್ಪದ ಪ್ರಯಾಣಿಕನ ಮೇಲೆ ಹಲ್ಲೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement