ಮಹಾರಾಷ್ಟ್ರ ಚುನಾವಣೆಗೂ ಮುನ್ನ ಹೊಟೇಲಿನಲ್ಲಿ ಹೈಡ್ರಾಮಾ ; ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ : ಮಾಜಿ ಸಚಿವರಿಂದ ನಿರಾಕರಣೆ

ಮುಂಬೈ : ಬುಧವಾರ (ನವೆಂಬರ್‌ ೨೦) ವಿಧಾನಸಭೆ ಚುನಾವಣೆಯ ನಿರ್ಣಾಯಕ ಮತದಾನದ ದಿನಕ್ಕಾಗಿ ಮಹಾರಾಷ್ಟ್ರ ಸಜ್ಜಾಗುತ್ತಿರುವಾಗ, ಮಂಗಳವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ  ಸಮ್ಮುಖದಲ್ಲಿ  ಹಣ ಹಂಚಲಾಗಿದೆ ಎಂಬ ಆರೋಪದ ನಂತರ ದೊಡ್ಡ ವಿವಾದ ಭುಗಿಲೆದ್ದಿದೆ.
ಬಹುಜನ ವಿಕಾಸ ಅಘಾಡಿ (ಬಿವಿಎ) ನಾಯಕ ಹಿತೇಂದ್ರ ಠಾಕೂರ್ ಅವರು ಈ ಆರೋಪಗಳನ್ನು ಮಾಡಿದ್ದಾರೆ. ತಾವಡೆ ಅವರ ಸಮ್ಮುಖದಲ್ಲಿ ನಲಸೋಪರದ ಬಿಜೆಪಿ ಅಭ್ಯರ್ಥಿ ರಾಜನ್ ನಾಯ್ಕ್ ಮತದಾರರ ಮೇಲೆ ಪ್ರಭಾವ ಬೀರಲು ಹಣ ಹಂಚುತ್ತಿದ್ದಾರೆ ಎಂದು ಬಹುಜನ ವಿಕಾಸ್ ಅಘಾಡಿ ಕಾರ್ಯಕರ್ತರು  ಆರೋಪಿಸಿದ್ದಾರೆ. ತಾವ್ಡೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್‌ನಲ್ಲಿರುವ ವಿವಾಂತಾ ಹೋಟೆಲ್‌ನಲ್ಲಿ ಮತದಾರರನ್ನು ಓಲೈಸಲು ಹಣ ಹಂಚುತ್ತಿದ್ದಾರೆ ಎಂದು  ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್, “ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತದಾರರ ಮೇಲೆ ಪ್ರಭಾವ ಬೀರಲು 5 ಕೋಟಿ ರೂಪಾಯಿಗಳನ್ನು ವಿತರಿಸಲು ವಿರಾರ್‌ಗೆ ಬರುತ್ತಿದ್ದಾರೆ ಎಂದು ಕೆಲವು ಬಿಜೆಪಿ ನಾಯಕರು ನನಗೆ ಮಾಹಿತಿ ನೀಡಿದ್ದಾರೆ. ಅವರಂತಹ ರಾಷ್ಟ್ರೀಯ ನಾಯಕ ಇಂತಹ ಕ್ಷುಲ್ಲಕ ಕೆಲಸಕ್ಕೆ ಮಣಿಯುವುದಿಲ್ಲ ಎಂದು ನಾನು ಭಾವಿಸಿದೆ. ಆದರೆ ನಾನು ಅವರನ್ನು ಇಲ್ಲಿ ನೋಡಿದೆ. ಅವರ ವಿರುದ್ಧ ಮತ್ತು ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ತಾವ್ಡೆ ತಂಗಿದ್ದ ಹೋಟೆಲ್ ಸಿಸಿಟಿವಿ ರೆಕಾರ್ಡಿಂಗ್ ಕ್ಲೋಸ್‌ ಆಗಿದೆ ಎಂದು ಬಹುಜನ ವಿಕಾಸ ಅಘಾಡಿ ಶಾಸಕರು ಆರೋಪಿಸಿದ್ದಾರೆ. “ಹೋಟೆಲ್ ಆಡಳಿತದೊಂದಿಗೆ ತಾವ್ಡೆ ಮತ್ತು ಬಿಜೆಪಿ ಒಡಂಬಡಿಕೆ ಇದ್ದಂತೆ ತೋರುತ್ತಿದೆ. ನಾವು ವಿನಂತಿಸಿದ ನಂತರವೇ ಅವರು ತಮ್ಮ ಸಿಸಿಟಿವಿಯನ್ನು ಸಕ್ರಿಯಗೊಳಿಸಿದ್ದಾರೆ ಎಂದು ಎಂದು ಅವರು ಹೇಳಿದ್ದಾರೆ.

ಆರೋಪ ನಿರಾಕರಿಸಿದ ತಾವ್ಡೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾವ್ಡೆ ಅವರು, ಬಿವಿಎ ಕಾರ್ಯಕರ್ತರು ಮಾಡಿದ ಆರೋಪಗಳನ್ನು ನಿರಾಕರಿಸಿದರು ಮತ್ತು ಚುನಾವಣಾ ಆಯೋಗವು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ನಲಸೋಪಾರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ನಡೆಯುತ್ತಿದ್ದು, ಚುನಾವಣಾ ದಿನದ ನೀತಿ ಸಂಹಿತೆ, ಮತದಾನ ಯಂತ್ರಗಳಿಗೆ ಹೇಗೆ ಸೀಲ್ ಹಾಕಬೇಕು, ಅಂತಿಮ ಮುದ್ರೆ ಹಾಕುವುದು ಹೇಗೆ ಇವುಗಳ ಕುರಿತು ವಿವರಿಸುತ್ತಿದ್ದೆವು. . ಈ ಅಂಶಗಳನ್ನು ವಿವರಿಸಲು ನಾನು ಅಲ್ಲಿಗೆ ಹೋಗಿದ್ದೆ. ಆದರೆ, ಬಹುಜನ ವಿಕಾಸ ಅಘಾಡಿ ಕಾರ್ಯಕರ್ತರು ನಾವು ಹಣ ಹಂಚುತ್ತಿದ್ದೇವೆ ಎಂದು ನಂಬಿದ್ದರು. ಈ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸಬೇಕು, ಪೊಲೀಸರು ತನಿಖೆ ನಡೆಸಬೇಕು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು. ಚುನಾವಣಾ ಆಯೋಗ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ತಾವ್ಡೆ ಹೇಳಿದ್ದಾರೆ.

ಎಫ್‌ಐಆರ್‌ ದಾಖಲು ಆದರೆ…
ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ಚುನಾವಣಾ ಆಯೋಗವು ತಾವ್ಡೆ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿದೆ. ಆದರೆ, ಹಣ ಹಂಚಿಕೆ ಆರೋಪಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಲಾಗಿದೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಎಕ್ಸ್‌ನಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ: “ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ ತಾವ್ಡೆ ವಿರುದ್ಧದ ಎಫ್‌ಐಆರ್ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ಮತ್ತು ಪ್ರತಿಪಕ್ಷಗಳು ಹೇಳುತ್ತಿರುವಂತೆ ಹಣ ಹಂಚಿದ ಹಿನ್ನೆಲೆಯಲ್ಲಿ ಅಲ್ಲ. ಚುನಾವಣಾ ಪ್ರಚಾರ ಮುಗಿದ ಬಳಿಕ ಮತ್ತೊಂದು ವಿಧಾನಸಭಾ ಕ್ಷೇತ್ರದಲ್ಲಿ ಕಾಣಿಸಿಕೊಂಡ ವಿಚಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಚುನಾವಣಾ ಪ್ರಚಾರ ಮುಗಿದ 48 ಗಂಟೆಗಳವರೆಗೆ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ಹೋಗುವಂತಿಲ್ಲ. ನೀತಿ ಸಂಹಿತೆ ಉಲ್ಲಂಘನೆಗಾಗಿ ಈ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕ್ರಮ ತೆಗೆದುಕೊಳ್ಳಲು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ಒತ್ತಾಯ
ಈ ಆರೋಪಗಳು ಕೋಲಾಹಲಕ್ಕೆ ಕಾರಣವಾಗಿದ್ದು, ರಾಜ್ಯದ ರಾಜಕೀಯ ವಲಯದಿಂದ ಪ್ರತಿಕ್ರಿಯೆಗಳು ಬರುತ್ತಿವೆ. ಕಾಂಗ್ರೆಸ್ ಪಕ್ಷವು ಹಂಚಿಕೊಂಡಿರುವ ವೀಡಿಯೊದಲ್ಲಿ ಬಹುಜನ ವಿಕಾಸ್ ಅಘಾಡಿ ಬೆಂಬಲಿಗರು ತಾವ್ಡೆ ಅವರ ಮುಂದೆ ಕರೆನ್ಸಿ ನೋಟುಗಳನ್ನು ಬೀಸುತ್ತಿರುವುದನ್ನು ತೋರಿಸಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ ತಾವ್ಡೆ ಮಹಾರಾಷ್ಟ್ರದ ಹೋಟೆಲ್‌ವೊಂದರಲ್ಲಿ ಹಣವನ್ನು ಬ್ಯಾಗ್‌ನಲ್ಲಿ ತೆಗೆದುಕೊಂಡು ಅಲ್ಲಿಗೆ ಜನರನ್ನು ಕರೆದು ಹಣವನ್ನು ಹಂಚುತ್ತಿದ್ದರು ಎಂದು ಹಿಂದಿಯಲ್ಲಿ ಕಾಂಗ್ರೆಸ್‌ನ ಟ್ವೀಟ್‌ನ ಸ್ಥೂಲ ಅನುವಾದವು ಸೂಚಿಸಿದೆ.
”ಸಾರ್ವಜನಿಕರಿಗೆ ಈ ಸುದ್ದಿ ತಿಳಿದಾಗ ಭಾರೀ ಕೋಲಾಹಲ ಉಂಟಾಯಿತು. ವಿನೋದ್ ತಾವ್ಡೆ ಹಣವಿರುವ ಹಲವು ವೀಡಿಯೋಗಳು ಹೊರಬರುತ್ತಿವೆ” ಎಂದು ಪಕ್ಷವು ಪತ್ರ ಬರೆದಿದ್ದು, ಚುನಾವಣಾ ಆಯೋಗವನ್ನು ಈ ವಿಷಯದ ಮಾಹಿತಿ ತೆಗೆದುಕೊಳ್ಳುವಂತೆ ಒತ್ತಾಯಿಸಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದಿಂದ ಪರಮಾಣು ಬೆದರಿಕೆ ಇಲ್ಲ ; ಅಮೆರಿಕ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿಲ್ಲ : ವಿದೇಶಾಂಗ ಕಾರ್ಯದರ್ಶಿ

ಏತನ್ಮಧ್ಯೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವೀಡಿಯೊವನ್ನು ಮರು ಪೋಸ್ಟ್ ಮಾಡಿದ್ದಾರೆ ಮತ್ತು ತಮ್ಮ ಕಾಮೆಂಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಳೆದು ತಂದಿದ್ದಾರೆ. “ಮೋದಿಜಿ, ಈ 5 ಕೋಟಿಗಳು ಯಾರ ಸೇಫ್‌ನಿಂದ ಬಂದವು? ಸಾರ್ವಜನಿಕರ ಹಣವನ್ನು ಲೂಟಿ ಮಾಡಿ ಟೆಂಪೋದಲ್ಲಿ ಕಳುಹಿಸಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.
ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಕೂಡ, “ಸಾಕ್ಷಾಧಾರಗಳ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮಹಾರಾಷ್ಟ್ರ ತಾನಾಗಿಯೇ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಸಂಸದೆ ಸುಪ್ರಿಯಾ ಸುಳೆ ಪ್ರತಿಕ್ರಿಯಿಸಿ, “ಇಂತಹ ದೊಡ್ಡ ಪಕ್ಷದ ರಾಷ್ಟ್ರೀಯ ನಾಯಕರೊಬ್ಬರು ಹಣ ಹಂಚುತ್ತಿರುವುದು ಆಘಾತಕಾರಿಯಾಗಿದೆ. ಇದು ಯಾವುದೇ ಪ್ರಜಾಪ್ರಭುತ್ವಕ್ಕೆ ತುಂಬಾ ಅಪಾಯಕಾರಿ. ಈ ದೇಶದಲ್ಲಿ ನೈತಿಕತೆ ಇದೆಯೋ ಇಲ್ಲವೋ? ಈ ಹಣ ಹಂಚಿಕೆಯನ್ನು ಸಾರ್ವಜನಿಕವಾಗಿ ಖಂಡಿಸುತ್ತೇನೆ. ಈ ಬಗ್ಗೆ ತನಿಖೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ.

ಆಧಾರ ರಹಿತ ಆರೋಪ ಎಂದ ಬಿಜೆಪಿ
ಏತನ್ಮಧ್ಯೆ, ತಾವ್ಡೆ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಬಿಜೆಪಿಯು ಅವುಗಳನ್ನು ಆಧಾರರಹಿತವೆಂದು ತಳ್ಳಿಹಾಕಿದೆ, ವಿರೋಧ ಪಕ್ಷದ ಮೈತ್ರಿ, ಮಹಾ ವಿಕಾಸ್ ಅಘಾಡಿ (ಎಂವಿಎ) ಚುನಾವಣೆಗೆ ಮುಂಚಿತವಾಗಿ ವಿವಾದವನ್ನು ಸೃಷ್ಟಿಸುವ “ಕೊನೆಯ ಪ್ರಯತ್ನ” ಎಂದು ಹೇಳಿದೆ.
ಆರೋಪದ ವರದಿಗಳ ನಂತರ ನವದೆಹಲಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಸಂಸದ ಮತ್ತು ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, “ವಿನೋದ್ ತಾವ್ಡೆ ನಮ್ಮ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಪಕ್ಷದ ಹಲವಾರು ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ… (ನಲಸೋಪಾರ) ಕ್ಷೇತ್ರದ ಅಭ್ಯರ್ಥಿ ಅವರನ್ನು ಬರುವಂತೆ ಕೇಳಿದರು. ಅವರು ಸಮೀಪದಿಂದ ಹೋಗುತ್ತಿದ್ದರು, ಆದ್ದರಿಂದ ಅವರು ಒಪ್ಪಿಕೊಂಡರು … ಇಂತಹ ಒಳಾಂಗಣ ಸಭೆಗಳನ್ನು ಮತದಾನ ಪ್ರಕ್ರಿಯೆಯ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ಸಲಹೆ-ಸೂಚನೆ ನೀಡಲು ಮಾಡಲಾಗುತ್ತದೆ ಎಂದು ಹೇಳಿದರು.
“ಹೋಟೆಲ್ ಮತ್ತು ಹತ್ತಿರದ ಪ್ರದೇಶಗಳ ಸಿಸಿಟಿವಿಯನ್ನು ಪರಿಶೀಲಿಸಬೇಕೆಂದು ನಾವೇ ಒತ್ತಾಯಿಸುತ್ತೇವೆ… 5 ಕೋಟಿ ರೂ.ಗಳಷ್ಟು ಹಣವನ್ನಂತೂ ಜೇಬಿನಲ್ಲಿ ತರಲು ಸಾಧ್ಯವಿಲ್ಲ. ಯಾರಾದರೂ ಅದನ್ನು ಹೊತ್ತೊಯ್ಯುತ್ತಿದ್ದರೆ ಅದು ಗೋಚರಿಸುತ್ತದೆ … ಅವರು ಪುರಾವೆಗಳನ್ನು ತೋರಿಸಬೇಕು ಮತ್ತು ಆಧಾರರಹಿತ ಆರೋಪಗಳನ್ನು ಮಾಡಬಾರದು ಎಂದು ಹೇಳಿದರು.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ | ಅಮೃತಸರದ ಗೋಲ್ಡನ್​ ಟೆಂಪಲ್ ಮೇಲೆ ದಾಳಿಗೆ ಯತ್ನಿಸಿದ್ದ ಪಾಕಿಸ್ತಾನ; ದಾಳಿ ವಿಫಲಗೊಳಿಸಿದ ಭಾರತೀಯ ಸೇನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement