ನವದೆಹಲಿ: ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ 235 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ‘ಪ್ರಚಂಡ’ ಗೆಲುವು ಸಾಧಿಸಿದೆ. ಜಾರ್ಖಂಡ್ ನಲ್ಲಿ ಇಂಡಿಯಾ ಮೈತ್ರಿಕೂಟ (INDIA bloc) 56 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಇಲ್ಲಿ ಬಿಜೆಪಿಗೆ ಮುಖಭಂಗವಾಗಿದೆ.
ಮಹಾರಾಷ್ಟ್ರದ ಒಟ್ಟು 288 ಕ್ಷೇತ್ರಗಳಲ್ಲಿ ಮಹಾಯುತಿ ಮೈತ್ರಿಕೂಟ 235 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 132 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ 57 ಕ್ಷೇತ್ರ ಹಾಗೂ ಅಜಿತ್ ಪವಾರ್ ನೇತೃತ್ವದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ 41 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು ಮಹಾಯುತಿ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿದೆ. ಸತತ ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸರ್ಕಾರ ರಚನೆ ಮಾಡಲಿದೆ. ಕಾಂಗ್ರೆಸ್ ನೇತೃತ್ವದ ಮಹಾವಿಕಾಸ ಅಘಾಡಿ ಮೈತ್ರಿಕೂಟ ಹೀನಾಯ ಸೋಲು ಕಂಡಿದೆ. ಕೇವಲ 49 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು ಅದಕ್ಕೆ ವಿಪಕ್ಷ ನಾಯಕನ ಸ್ಥಾನ ದೊರಕುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಯುಬಿಟಿ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ ಶರದ ಪವಾರ್ ನೇತೃತ್ವದ ಎನ್ ಸಿಪಿ ಕೇವಲ 10 ಸ್ಥಾನಗಳನ್ನು ಗೆದ್ದಿದೆ. 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 16 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಇಂಡಿಯಾ ಮೈತ್ರಿಕೂಟಕ್ಕೆ ತೀವ್ರ ಮುಖಭಂಗವಾಗಿದೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಂದು ಪಕ್ಷಕ್ಕೆ ಅಧಿಕೃತ ವಿಪಕ್ಷ ಸ್ಥಾನ ಗಳಿಸಲು ಯಾವುದೇ ಪಕ್ಷ ಕನಿಷ್ಠ 29 ಸ್ಥಾನಗಳನ್ನು ಗೆದ್ದಿರಬೇಕು. ಹಾಲಿ ಪರಿಸ್ಥಿತಿಯಲ್ಲಿ ಉದ್ಧವ್ ಠಾಕ್ರೆ ಬಣ 20 ಸ್ಥಾನ, ಕಾಂಗ್ರೆಸ್ 16 ಸ್ಥಾನ ಮತ್ತು ಶರದ್ ಪವಾರ್ ಎನ್ ಸಿಪಿ ಪಕ್ಷ 10 ಸ್ಥಾನಗಳನ್ನು ಮಾತ್ರ ಪಡೆದಿದೆ. ಹೀಗಾಗಿ ಮಹಾವಿಕಾಸ ಅಘಾಡಿಯ ಯಾವುದೇ ಪಕ್ಷವೂ ಅಧಿಕೃತ ವಿಪಕ್ಷ ಸ್ಥಾನಕ್ಕೆ ಅರ್ಹತೆ ಪಡೆದಿಲ್ಲ ಎಂದು ಹೇಳಲಾಗುತ್ತಿದೆ.
ಮತ್ತೊಂಡೆದೆ ಜಾರ್ಖಂಡ್ ನಲ್ಲಿ 81 ವಿಧಾನಸಭೆ ಕ್ಷೇತ್ರಗಳ ಪೈಕಿ ಹೇಮಂತ್ ಸೊರೆನ್ ನೇತೃತ್ವದ ಜೆಎಂಎಂ ಪಕ್ಷ ಒಂದೇ 34 ಕ್ಷೇತ್ರಗಳಲ್ಲಿ ಗೆದ್ದಿದ್ದರೆ ಕಾಂಗ್ರೆಸ್ 16 ಹಾಗೂ ಆರ್ ಜೆಡಿ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 56 ಕ್ಷೇತ್ರಗಳ ಗೆಲುವಿನೊಂದಿಗೆ ಇಂಡಿಯಾ ಮೈತ್ರಿಕೂಟ (INDIA bloc) ಕ್ಕೆ ಸ್ಪಷ್ಟ ಬಹುಮತ ಬಂದಿದ್ದು ಹೇಮಂತ್ ಸೊರೆನ್ ನೇತೃತ್ವದಲ್ಲಿ ಮತ್ತೊಮ್ಮೆ ಜೆಎಂಎಂ ಸರ್ಕಾರ ರಚಿಸಲಿದೆ. ಬಿಜೆಪಿಗೆ ಮುಖಭಂಗವಾಗಿದ್ದು ಎನ್ ಡಿಎ ಮೈತ್ರಿಕೂಟ ಕೇವಲ 24 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ