ವಯನಾಡು ಉಪಚುನಾವಣೆ: ರಾಹುಲ್‌ ಗಾಂಧಿಗಿಂತ ಹೆಚ್ಚಿನ ಅಂತರದಲ್ಲಿ ಜಯಗಳಿಸಿದ ಸಹೋದರಿ ಪ್ರಿಯಾಂಕಾ ಗಾಂಧಿ…!

ತಿರುವನಂತಪುರಂ: ಇಡೀ ದೇಶದ ಗಮನ ಸೆಳೆದಿದ್ದ ವಯನಾಡು (Wayanad) ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ (Priyanka Gandhi) 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ.
ರಾಹುಲ್‌ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ಈ ಕ್ಷೇತ್ರದಲ್ಲಿ ಸಹೋದರಿ ಪ್ರಿಯಾಂಕಾ ಗಾಂಧಿ ಸಹೋದರ ರಾಹುಲ್‌ ಗಾಂಧಿ (ಗೆಲುವಿನ ಅಂತರ 3.65 ಲಕ್ಷ ಮತಗಳು) ಅವರಿಗಿಂತ ಹೆಚ್ಚಿನ ಅಂತರದಲ್ಲಿ ಜಯಗಳಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ಒಟ್ಟು 6,17,942 ಮತ ಪಡೆದು 4,08,036 ಮತಗಳ ದೊಡ್ಡ ಅಂತರದಿಂದ ಗೆದ್ದು ಇದೇ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಲಿದ್ದಾರೆ. ಪ್ರತಿಸ್ಪರ್ಧಿ ಎಲ್‌ಡಿಎಫ್‌ ಅಭ್ಯರ್ಥಿ ಸತ್ಯನ್‌ ಮೊಕೇರಿ 2,09,906 ಮತಗಳನ್ನು ಪಡೆದರೆ ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ 1,09,202 ಮತಗಳನ್ನು ಪಡೆದಿದ್ದಾರೆ.

ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಉತ್ತರ ಪ್ರದೇಶದ ರಾಯ್‌ ಬರೇಲಿ ಮತ್ತು ವಯನಾಡಿನಲ್ಲಿ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿದ್ದರಿಂದ ಅವರು ವಯನಾಡು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಕಾಂಗ್ರೆಸ್‌ ಭದ್ರಕೋಟೆಯಾಗಿದ್ದರೂ ಇಲ್ಲಿ 16 ಜನರು ಕಣದಲ್ಲಿದ್ದರು. ಈ ಪೈಕಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌, ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್‌ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ನಡುವೆ ತ್ರಿಕೋನ ಸ್ಪರ್ಧೆಯಿತ್ತು. ಯುಡಿಎಫ್‌ನಿಂದ ಪ್ರಿಯಾಂಕಾ ಗಾಂಧಿ ವಾದ್ರಾ, ಎಲ್‌ಡಿಎಫ್‌ನಿಂದ ಸತ್ಯನ್‌ ಮೊಕೇರಿ ಹಾಗೂ ಎನ್‌ಡಿಎಯಿಂದ ಬಿಜೆಪಿಯ ನವ್ಯಾ ಹರಿದಾಸ ಸ್ಪರ್ಧಿಸಿದ್ದರು.
5 ವರ್ಷಗಳ ಹಿಂದೆ ಸಕ್ರಿಯ ರಾಜಕಾರಣ ಪ್ರವೇಶಿಸಿದ್ದ ಪ್ರಿಯಾಂಕಾ ಗಾಂಧಿ (Priyanka Gandhi) ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇವರ ಸ್ಪರ್ಧೆಯಿಂದ ಈ ಕ್ಷೇತ್ರ ದೇಶದ ಗಮನ ಸೆಳೆದಿತ್ತು. ಪ್ರಿಯಾಂಕಾ ಗಾಂಧಿ ಗೆಲುವಿನ ಮೂಲಕ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸಂಸತ್ತಿನಲ್ಲಿ ಇರಲಿದ್ದಾರೆ. ಸೋನಿಯಾ ಗಾಂಧಿ ರಾಜ್ಯಸಭೆ ಸದಸ್ಯರಾಗಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ 20 ನಗರಗಳ ಮೇಲೆ ಪಾಕಿಸ್ತಾನದಿಂದ ಡ್ರೋನ್ ದಾಳಿ ;ಎಲ್ಲವನ್ನೂ ಹೊಡೆದುರುಳಿಸಿದ ಸೇನೆ...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement