
ಕುಂದಾಪುರ : ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ-1 ಚಲನಚಿತ್ರದ ಚಿತ್ರೀಕರಣಕ್ಕೆ ತೆರಳುತ್ತಿದ್ದ ನೃತ್ಯ ಕಲಾವಿದರಿದ್ದ ಮಿನಿ ಬಸ್ ಭಾನುವಾರ ರಾತ್ರಿ ಪಲ್ಟಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸುಮಾರು 25 ಜೂನಿಯರ್ ನೃತ್ಯಗಾರರು ಕಾಂತಾರ ಸಿನಿಮಾದ ಶೂಟಿಂಗ್ ನಲ್ಲಿ ಭಾಗವಹಿಸಿ ಮಿನಿ ಬಸ್ ನಲ್ಲಿ ತೆರಳುತ್ತಿದ್ದರು. ಸ್ಕೂಟಿ ಅಡ್ಡ ಬಂದ ಪರಿಣಾಮ ಅಪಘಾತವತಪ್ಪಿಸಲು ಚಾಲಕ ಯತ್ನಿಸಿದಾಗ ಮಿನಿ ಬಸ್ ಪಲ್ಟಿಯಾಗಿದೆ ಎನ್ನಲಾಗಿದೆ. ಈ ಪೈಕಿ ಆರು ಜನರಿಗೆ ಗಾಯವಾಗಿದೆ ಎಂದು ಗೊತ್ತಾಗಿದೆ. ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕೊಲ್ಲೂರಿಗೆ ಹೋಗುತ್ತಿದ್ದಾಗ ಹಾಲ್ಕಲ್ಲದ ಆನೆ ಝರಿ ಎಂಬಲ್ಲಿ ಈ ಅಪಘಾತ ನಡೆದಿದೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಜಡ್ಕಲ್ ಹಾಗೂ ಕುಂದಾಪುರ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.

ಹೊಂಬಾಳೆ ಫಿಲ್ಮ್ಸ್’ ಮೂಲಕ ವಿಜಯ್ ಕಿರಗಂದೂರು ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಅವರು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಭೂಮಿಕೆಯಲ್ಲೂ ನಟಿಸುತ್ತಿದ್ದಾರೆ. ಸಿನೆಮಾ ಕುಂದಾಪುರ ಸೇರಿದಂತೆ ಕರಾವಳಿಯ ರಮಣೀಯ ಸ್ಥಳಗಳಲ್ಲಿ ಚಿತ್ರಿಕರಣವಾಗುತ್ತಿದೆ. ಇತ್ತೀಚಿಗಷ್ಟೇ ಚಲನಚಿತ್ರ ಬಿಡುಗಡೆಯ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ. ಮುಂದಿನ ವರ್ಷದ ಅಕ್ಟೋಬರ್ 2 ರಂದು ಈ ಚಿತ್ರ ರಿಲೀಸ್ ಆಗಲಿದ್ದು ಭರದಿಂದ ಚಿತ್ರೀಕರಣ ನಡೆಯುತ್ತಿದೆ. ಜೂನಿಯರ್ ನೃತ್ಯ ಕಲಾವಿದರು ಹಾಡಿನ ಚಿತ್ರೀಕರಣಕ್ಕೆ ಬೆಂಗಳೂರಿನಿಂದ ಬಂದಿದ್ದ ವೇಳೆ ಈ ಘಟನೆ ನಡೆದಿದೆ.


ನಿಮ್ಮ ಕಾಮೆಂಟ್ ಬರೆಯಿರಿ