ಹೊಸಪೇಟೆ / ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದಾಗಿ ಕ್ಷೇತ್ರಕ್ಕೆ ಬರುತ್ತಿದ್ದ ಅನುದಾನ ಕಡಿತವಾಗಿದ್ದು, ಒಂದೆರಡು ಗ್ಯಾರಂಟಿ ಯೋಜನೆಗಳನ್ನು ಕೈ ಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡುವುದಾಗಿ ಕಾಂಗ್ರೆಸ್ ಗವಿಯಪ್ಪ ಹೇಳಿರುವುದು ಈಗ ವೈರಲ್ ಆಗುತ್ತಿದೆ.
ಹೊಸಪೇಟೆಯ ಇಪ್ಪಿತೇರಿ ಮಾಗಾಣಿಯಲ್ಲಿ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಹೊಸಪೇಟೆ ಕಾಂಗ್ರೆಸ್ ಶಾಸಕ ಹೆಚ್.ಆರ್.ಗವಿಯಪ್ಪ, ಗ್ಯಾರಂಟಿ ಸ್ಕೀಂಗಳಿಂದಾಗಿ ಕ್ಷೇತ್ರಗಳಿಗೆ ಅನುದಾನ ಕಡಿತವಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.
ಗ್ಯಾರಂಟಿ ಯೋಜನೆಯಲ್ಲಿ ಒಂದು ಎರಡು ಯೋಜನೆ ರದ್ದು ಮಾಡಿದರೆ ಅನುಕೂಲವಾಗುತ್ತದೆ. ಯೋಜನೆ ರದ್ದು ಮಾಡುವುದರಿಂದ ಅನುದಾನಕ್ಕೆ ಹೆಚ್ಚು ಅನುಕೂಲವಾಗಲಿದೆ. ಜಿಲ್ಲೆಯ ಜನರಿಗೆ ಆಶ್ರಯ ಮನೆಗಳು ಬರುತ್ತಿಲ್ಲ. ಶಕ್ತಿ ಯೋಜನೆ ಸೇರಿದಂತೆ ಇನ್ನೆರೆಡು ಗ್ಯಾರಂಟಿಗಳು ಕಡಿಮೆ ಮಾಡಲು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ. ಅವರೇನು ತೀರ್ಮಾನ ಮಾಡುತ್ತಾರೆ ನೋಡೋಣ, ಅದಕ್ಕೆ ನಾವು ಬದ್ಧರಾಗಿದೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕ ಗವಿಯಪ್ಪ ಹೇಳಿರುವ ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಪಕ್ಷವು ತಾನು ನೀಡಿದ ಭರವಸೆಗಳಿಗೆ ಬದ್ಧವಾಗಿದೆ ಎಂದು ಹೇಳಿದ್ದಾರೆ. “ಇದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಶಾಸಕರಾಗಲಿ ಅಥವಾ ಪಕ್ಷದ ಕಾರ್ಯಕರ್ತರಾಗಲಿ ಯಾರೂ ಈ ವಿಷಯವನ್ನು ಪ್ರಸ್ತಾಪಿಸಬಾರದು. ಶಾಸಕ ಗವಿಯಪ್ಪ ಅವರು ಈ ರೀತಿ ಹೇಳಬಾರದಿತ್ತು. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಶಿವಕುಮಾರ ಹೇಳಿದರು. ಗವಿಯಪ್ಪ ಅವರ ಹೇಳಿಕೆಗೆ ಶೋಕಾಸ್ ನೋಟಿಸ್ ಜಾರಿ ಮಾಡುವ ಚಿಂತನೆಯೂ ಇದೆ ಎಂದು ಅವರು ಹೇಳಿದರು.
ಇದಕ್ಕೂ ಮೊದಲು ಶಾಸಕ ಗವಿಯಪ್ಪ ಅವರು, ತಮ್ಮ ಕ್ಷೇತ್ರಕ್ಕೆ ಸಾಕಷ್ಟು ಹಣ ಮಂಜೂರು ಮಾಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ತಮ್ಮ ಕ್ಷೇತ್ರಕ್ಕೆ ಕಡಿಮೆ ಅನುದಾನ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ