ವಿವಿ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಅಸ್ತು; ರಾಜ್ಯಪಾಲರ ಅಧಿಕಾರ ಮೊಟಕು, ಸಿಎಂಗೆ ಚಾನ್ಸಲರ್ ಅಧಿಕಾರ…

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 9 ಮಸೂದೆಗಳಿಗೆ ಅನುಮೋದನೆ ನೀಡಲಾಗಿದೆ. ಅಲ್ಲದೆ, ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ವಿಶ್ವ ವಿದ್ಯಾಲಯ ತಿದ್ದುಪಡಿ ವಿಧೇಯಕಕ್ಕೂ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಾನೂನು ಹಾಗೂ ಸಂಸದೀಯ ಖಾತೆ ಸಚಿವ ಹೆಚ್.ಕೆ.ಪಾಟೀಲ ಅವರು, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ- 2024 ಮಂಡನೆಗೆ ಸಂಪುಟ ಸಭೆ ಸಮ್ಮತಿ ಸೂಚಿಸಿದೆ. ಈ ವಿಧೇಯಕದಲ್ಲಿ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ಪ್ರಸ್ತುತ ವಿದ್ಯಾಲಯಗಳಲ್ಲಿ ರಾಜ್ಯಪಾಲರು ಕುಲಪತಿಗಳಾಗಿದ್ದರು. ಈ ತಿದ್ದುಪಡಿ ವಿಧೇಯಕದಲ್ಲಿ ರಾಜ್ಯಪಾಲರ ಬದಲು ವಿಶ್ವ ವಿದ್ಯಾಲಯಗಳಿಗೆ ಮುಖ್ಯಮಂತ್ರಿಗಳು ಕುಲಪತಿಗಳಾಗಲಿದ್ದಾರೆ. ಈ ವಿಶ್ವವಿದ್ಯಾಲಯದ ಎಲ್ಲಾ ನೇಮಕಾತಿ, ಆಡಳಿತಾತ್ಮಕ ಅಧಿಕಾರ ಮುಖ್ಯಮಂತ್ರಿಗಳ ಬಳಿ ಇರಲಿದೆ. ಇದರಿಂದ ವಿಶ್ವವಿದ್ಯಾಲಯದ ಕಾರ್ಯವೈಖರಿ ಹೆಚ್ಚು ಸಕ್ರಿಯ ವಾಗಲಿದೆ ಹಾಗೂ ವೇಗವಾಗಿ ನಿರ್ಣಯ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದರು.

ಇದಲ್ಲದೆ, ಚಾಣಕ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ-2024, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ-2024, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (2ನೇ ತಿದ್ದುಪಡಿ) 2024, ಕರ್ನಾಟಕ ಪ್ರವಾಸೋದ್ಯಮ ರೋಪ್‌ವೇಸ್ ವಿಧೇಯಕ 2024, ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ, 2024, ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ ಮತ್ತು ನಿರ್ವಹಣಾ ನಿಯಂತ್ರಣ) (ತಿದ್ದುಪಡಿ) ವಿಧೇಯಕ, ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2024 ಸೇರಿದಂತೆ 9 ವಿಧೇಯಕಗಳನ್ನು ವಿಧಾನಸಭೆಯಲ್ಲಿ ಮಂಡಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಅಸುರಕ್ಷಿತ ಕೊಳವೆ ಬಾವಿ ನಿಯಂತ್ರಣ ಮಸೂದೆ: ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ ಮತ್ತು ನಿರ್ವಹಣಾ ನಿಯಂತ್ರಣ) (ತಿದ್ದುಪಡಿ) ವಿಧೇಯಕ ಮಂಡಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ. ಕಾರ್ಯನಿರ್ವಹಿಸದ ಅಥವಾ ಸ್ಥಗಿತಗೊಂಡಿರುವ ಕೊಳವೆ ಬಾವಿಗಳಲ್ಲಿ ಮಕ್ಕಳು ಬಿದ್ದು ಅಪಘಾತಕ್ಕೀಡಾಗುವುದನ್ನು ತಪ್ಪಿಸಲು ಈ ವಿಧೇಯಕ ತರಲಾಗುತ್ತಿದೆ. ಜಮೀನು ಮಾಲೀಕರು, ಏಜೆನ್ಸಿಗಳು ಕೊಳವೆ ಬಾವಿಗೆ ಅಗತ್ಯ ಸುರಕ್ಷತಾ ಕ್ರಮ ಉಲ್ಲಂಘಿಸಿದರೆ ಗರಿಷ್ಠ 1 ವರ್ಷ ಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸುವ ಅವಕಾಶ ಕಾನೂನಿನಲ್ಲಿ ಇರಲಿದೆ.
ಅಲ್ಲದೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಗೊಳಿಸಿದೆ. ಇದರನ್ವಯ ಕುಲಪತಿಗಳ ಹುದ್ದೆಗೆ ಅಭ್ಯರ್ಥಿಗಳು ಪ್ರಾಧ್ಯಾಪಕ ಹುದ್ದೆಯಲ್ಲಿ ಕನಿಷ್ಠ 10 ಸೇವೆ ಸಲ್ಲಿಸಬೇಕಾಗಿರುತ್ತದೆ. ಈ ನಿಯಮಗಳನ್ನು ಕಾಯ್ದೆಯಲ್ಲಿ ಅಳವಡಿಸಿಕೊಳ್ಳಲು ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ. ಇದರಿಂದ ಕೆಲವೊಂದು ಪ್ರಕರಣಗಳಿಗೆ ತಿದ್ದುಪಡಿ ಪ್ರಸ್ತಾಪಿಸಲಾಗಿದೆ ಎಂದರು.

ಪ್ರಮುಖ ಸುದ್ದಿ :-   ಶಿರಸಿ ; ಹಾಸ್ಟೆಲ್ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ

ಚಾಣಕ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ ಮಂಡನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. 2021ರಲ್ಲಿ ಚಾಣಕ್ಯ ಖಾಸಗಿ ವಿವಿ ಕಾಯ್ದೆ ಜಾರಿಗೆ ಬಂದಿತ್ತು. 27 ಖಾಸಗಿ ವಿಶ್ವವಿದ್ಯಾಲಯಗಳ ಅಧಿನಿಯಮಗಳಲ್ಲಿ ಪ್ರಬಂಧಕ ಮಂಡಳಿಗಳಲ್ಲಿ ರಾಜ್ಯ ಸರ್ಕಾರದ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಚಾಣಕ್ಯ ಖಾಸಗಿ ವಿವಿ ಕಾಯ್ದೆಯಡಿ ಇದಕ್ಕೆ ಅವಕಾಶ ಇರಲಿಲ್ಲ. ಹೀಗಾಗಿ ಈ ತಿದ್ದುಪಡಿ ಮೂಲಕ ಈ ಅವಕಾಶವನ್ನು ಚಾಣಕ್ಯ ವಿಶ್ವವಿದ್ಯಾಲಯದ ಪ್ರಬಂಧಕ ಮಂಡಳಿಗೂ ಸಹ ಕಲ್ಪಿಸಲು ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು.
ಕಾರ್ಮಿಕ ಕಲ್ಯಾಣ ನಿಧಿ ವಂತಿಕೆ ಪಾಲು ಹೆಚ್ಚಿಸುವ ಬಿಲ್: ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ-2024 ಮಂಡನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕಲ್ಯಾಣ ನಿಧಿಗೆ ವಂತಿಕೆ ರೂಪದಲ್ಲಿ ಪ್ರಸ್ತುತ ಕಾರ್ಮಿಕರ, ಮಾಲೀಕರ, ಸರ್ಕಾರದಿಂದ ಕ್ರಮ ಪ್ರಕಾರ 20:40:20 ಅನುಪಾತ ಇತ್ತು. ಅದನ್ನು ಬದಲಾಯಿಸಿ ಕಾರ್ಮಿಕ, ಮಾಲೀಕ ಹಾಗೂ ಸರ್ಕಾರದ ವಂತಿಕೆ ಪಾಲನ್ನು 50:100:50ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇದರಿಂದ ವಾರ್ಷಿಕ 100 ಕೋಟಿ ರೂ.ಗೂ ಹೆಚ್ಚು ವಂತಿಕೆ ಸಂಗ್ರಹವಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಇಬ್ಬರೂ ವೃತ್ತಿಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ: ರೋಹಿಣಿ ಸಿಂಧೂರಿ–ರೂಪಾ ಜಗಳದ ಕುರಿತು ಸುಪ್ರೀಂ ಕೋರ್ಟ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement