ನವದೆಹಲಿ: ಕಾಂಗ್ರೆಸ್ ಪಕ್ಷವು ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಜೊತೆಗಿನ ಮೈತ್ರಿಯನ್ನು ತಳ್ಳಿಹಾಕಿದ್ದು, ಏಕಾಂಗಿಯಾಗಿ ಸ್ಪರ್ಧಿವುದಾಗಿ ಶುಕ್ರವಾರ ಪ್ರಕಟಿಸಿದೆ.
ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 70 ಸ್ಥಾನಗಳಲ್ಲಿ ಪಕ್ಷವು ಸ್ವಂತವಾಗಿ ಸ್ಪರ್ಧಿಸಲಿದೆ ಎಂದು ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ಹೇಳಿದ್ದಾರೆ. ಚುನಾವಣೆಗೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಚುನಾವಣೆಯ ನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷವು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ಒಂದು ಏಕೀಕೃತ ಬ್ಯಾನರ್ ಅಡಿಯಲ್ಲಿ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಸುಮಾರು 30 ಸಮಾನ ಮನಸ್ಕ ಪಕ್ಷಗಳು ʼಇಂಡಿಯಾʼ ಎಂಬ ಬಣದ ಅಡಿ ಮೈತ್ರಿಕೂಟ ರಚಿಸಿಕೊಂಡಿವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಪ್ರಬಲ ಪ್ರತಿಪಕ್ಷವಾಗುವುದು ಈ ಮೈತ್ರಿಕೂಟದ ಮುಖ್ಯ ಉದ್ದೇಶವಾಗಿತ್ತು.
2024 ರ ಲೋಕಸಭೆ ಚುನಾವಣೆಯ ಸಮಯದಲ್ಲಿ ಸಂಘಟಿತ ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದ್ದರೂ, ನಂತರದ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಇಂಡಿಯಾ ಬ್ಲಾಕ್ ಅಂಗ ಪಕ್ಷಗಳು ಅದೇ ಮಟ್ಟದ ಉತ್ಸಾಹವನ್ನು ತೋರಿಸಲಿಲ್ಲ.
ರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ ನಂತರ ಈಗ ದೆಹಲಿಯ ಎಲ್ಲ 70 ದೆಹಲಿ ವಿಧಾನಸಭಾ ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಘೋಷಿಸಿದೆ. ಇಂಡಿಯಾ ಮೈತ್ರಿಕೂಟದ ಅಂಗಪಕ್ಷವಾದ ಎಎಪಿ (AAP) ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ದೆಹಲಿ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ವಿಧಾನಸಭೆಯ ಅಧಿಕಾರಾವಧಿಯು ಫೆಬ್ರವರಿ 15ರಂದು ಮುಕ್ತಾಯಗೊಳ್ಳುವುದರಿಂದ, ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ. ಆಡಳಿತಾರೂಢ ಎಎಪಿ ಈಗಾಗಲೇ ಚುನಾವಣಾ ಮೋಡ್‌ನಲ್ಲಿದ್ದು, ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ