ರಾಮಾಯಣ’ ನಾಟಕ ಪ್ರದರ್ಶನದ ವೇಳೆ ವೇದಿಕೆಯಲ್ಲೇ ಜೀವಂತ ಹಂದಿ ಕೊಂದು ತಿಂದ ರಾಕ್ಷಸನ ಪಾತ್ರಧಾರಿ…!

ಗಂಜಾಮ್​(ಒಡಿಶಾ): ರಾಮಾಯಣ ನಾಟಕದ ಪ್ರದರ್ಶನದ ವೇಳೆ ಪಾತ್ರಧಾರಿಯೊಬ್ಬ ಹಂದಿಯನ್ನು ವೇದಿಕೆ ಮೇಲೆಯೇ ಕೊಂದು, ಹಸಿ ಮಾಂಸವನ್ನು ಭಕ್ಷಿಸಿದ ಆಘಾತಕಾರಿ ಘಟನೆ ಒಡಿಶಾದ ಗಂಜಾಮ್​ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಗಂಜಾಮ್​ ಜಿಲ್ಲೆಯ ರಾಲಾಬ್ ಎಂಬ ಗ್ರಾಮದಲ್ಲಿ ನವೆಂಬರ್​ 25ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ‘ರಾಮಾಯಣ ನಾಟಕ’ದ ವೇದಿಕೆಯಲ್ಲಿ ಜೀವಂತ ಹಂದಿಯನ್ನು ಕೊಂದು ತಿಂದಿದ್ದಲ್ಲದೇ, ಹಾವಿಗೆ ಕಿರುಕುಳ ನೀಡಲಾಗಿದೆ.
ರಾಲಾಬ್ ಗ್ರಾಮದಲ್ಲಿ ರಾಮಾಯಣ ಕಥೆಯ ನಾಟಕ ನಡೆಯುತ್ತಿತ್ತು. ಈ ವೇಳೆ ರಾಕ್ಷಸ ಪಾತ್ರಧಾರಿಯೊಬ್ಬ ಕಥಾವಸ್ತುವಾಗಿ ತಂದಿದ್ದ ಜೀವಂತ ಹಂದಿಯನ್ನು ವೇದಿಕೆ ಮೇಲೆಯೇ ಕೊಂದು, ಅದರ ಮಾಂಸವನ್ನು ಭಕ್ಷಿಸಿದ್ದಾನೆ. ಇದನ್ನು ಕತೆಯ ಪ್ರಭಾವ ಹೆಚ್ಚಿಸಲು ಈ ರೀತಿ ಮಾಡಿದ್ದ ರಾಕ್ಷಸ ಪಾತ್ರಧಾರಿಯ ಈ ‘ಕೃತ್ಯ’ ವೀಕ್ಷಕರಲ್ಲಿ ಗಾಬರಿ ತರಿಸಿದೆ. ನಂತರ ಕಲಾವಿದ ಹಾವಿನ ಜೊತೆ ಆಟವಾಡಿದ್ದಾನೆ. ಈ ಭಯಾನಕ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರಾಣಿಪ್ರಿಯರು ನಾಟಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಾತ್ರಧಾರಿ, ನಿರ್ದೇಶಕನ ಬಂಧನ
ಸ್ಟೇಜ್‌ನಲ್ಲೇ ಹಂದಿಯನ್ನು ಕೊಂದು ಮಾಂಸ ತಿಂದ ರಂಗಭೂಮಿ ನಟನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದೇವೆ ಎಂದು ಹಿಂಜಿಲಿ ಠಾಣೆ ಪ್ರಭಾರಿ ಇನ್ಸ್‌ಪೆಕ್ಟರ್ ಶ್ರೀನಿಬಾಸ್ ಸೇಠಿ ತಿಳಿಸಿದ್ದಾರೆ. ಕಂಜಿಯಾನಲ್ ಯಾತ್ರೆ ಉತ್ಸವದಲ್ಲಿ ಪ್ರೇಕ್ಷಕರನ್ನು ಸೆಳೆಯಲು ನಾಟಕ ತಂಡವು ಈ ರೀತಿ ಮಾಡಿದೆ. ರಾಕ್ಷಸ ಪಾತ್ರಧಾರಿ ಜೀವಂತ ಹಂದಿಯ ಹೊಟ್ಟೆಯನ್ನು ಚಾಕುವಿನಿಂದ ಸೀಳಿದ್ದಾನೆ, ಹಾವುಗಳನ್ನು ಪ್ರದರ್ಶಿಸಿದ್ದಾನೆ. ಹಂದಿಯನ್ನು ವೇದಿಕೆಯ ಸೀಲಿಂಗ್‌ಗೆ ಕಟ್ಟಲಾಗಿತ್ತು. ಅದನ್ನು ಕೊಂದ ನಂತರ ಕೆಲವು ಅಂಗಗಳನ್ನು ಎಲ್ಲರ ಮುಂದೆ ತಿಂದಿದ್ದಾನೆ ಎಂದು ಹೇಳಿದ್ದಾರೆ.
ಜೀವಂತ ಹಂದಿಯನ್ನು ಕೊಂದು ತಿಂದು, ವೇದಿಕೆಯ ಮೇಲೆ ವಿಷಕಾರಿ ಹಾವಿಗೆ ನೋವುಂಟು ಮಾಡಿದ ದೃಶ್ಯ ಹೊರಬಿದ್ದ ಬಳಿಕ ಇದರ ವಿರುದ್ಧ ಪ್ರಾಣಿ ಹಿಂಸೆ ಮತ್ತು ವನ್ಯಜೀವಿ ಕಾಯ್ದೆ ಉಲ್ಲಂಘನೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಕ್ಷಸ ಪಾತ್ರಧಾರಿ ಮತ್ತು ನಿರ್ದೇಶಕನನ್ನು ಬಂಧಿಸಲಾಗಿದೆ. ಈ ಕುರಿತು ಪೊಲೀಸರು ಮತ್ತು ಅರಣ್ಯ ಇಲಾಖೆ ಜಂಟಿ ತನಿಖೆ ಆರಂಭಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬರ್ಹಾಂಪುರದ ಪ್ರಾದೇಶಿಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯಕುಮಾರ ಅವರು, “ನಾಟಕದ ವೇಳೆ ಹಂದಿಯನ್ನು ಕೊಂದು, ಹಾವಿಗೆ ತೊಂದರೆ ನೀಡಲಾಗಿದೆ. ಪ್ರಾಣಿ ಹಿಂಸೆ ಮತ್ತು ವನ್ಯಜೀವಿ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಪಿಒಕೆ ಹಿಂತಿರುಗಿಸಿ, ಉಗ್ರರನ್ನು ಹಸ್ತಾಂತರಿಸಿ ; ಇದು ಬಿಟ್ಟು ಬೇರೆ ಮಾತುಕತೆ ಇಲ್ಲ; ಡಿಜಿಎಂಒ ಸಭೆಗೂ ಮುನ್ನ ಪಾಕಿಸ್ತಾನಕ್ಕೆ ಭಾರತ ಸ್ಪಷ್ಟ ಸಂದೇಶ

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement