ಮುಂಬೈ: ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಉದ್ಧವ್ ಠಾಕ್ರೆ ಅವರ ಆಪ್ತರೊಬ್ಬರ ವಿವಾದಾತ್ಮಕ ಹೇಳಿಕೆಯ ನಂತರ ಸಮಾಜವಾದಿ ಪಕ್ಷವು ಮಹಾರಾಷ್ಟ್ರದಲ್ಲಿ ವಿಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ ಅಘಾಡಿ (ಎಂವಿಎ)ಯಿಂದ ಹೊರಬರಲು ನಿರ್ಧರಿಸಿದೆ.
ಬಾಬರಿ ಮಸೀದಿ ಧ್ವಂಸದ 32 ನೇ ವಾರ್ಷಿಕೋತ್ಸವದಂದು, ಶಿವಸೇನೆಯ (ಯುಬಿಟಿ) ನಾಯಕ ಮಿಲಿಂದ್ ನಾರ್ವೇಕರ್ ಅವರು ಎಕ್ಸ್‌ನಲ್ಲಿ ಮಸೀದಿಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಶಿವಸೇನೆಯ ಮಠಾಧೀಶ ಬಾಳಾಸಾಹೇಬ ಠಾಕ್ರೆ ಅವರು “ಇದನ್ನು ಮಾಡಿದವರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ ಪೋಸ್ಟ್‌ನಲ್ಲಿ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಮತ್ತು ತಮ್ಮ ಚಿತ್ರಗಳನ್ನು ಹಾಕಿಕೊಂಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷವು ಇಬ್ಬರು ಶಾಸಕರನ್ನು ಹೊಂದಿದೆ. ಮಹಾ ವಿಕಾಸ ಅಘಾಡಿ (ಎಂವಿಎ) ಅಂಗಪಕ್ಷಗಳು ಪಕ್ಷಗಳು ಶನಿವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ಹೊರಗುಳಿಯಲು ನಿರ್ಧರಿಸಿದ ನಂತರ ನಡೆದ ಬೆಳವಣಿಗೆಯಲ್ಲಿ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಅಬು ಅಸಿಮ್ ಅಜ್ಮಿ ಮತ್ತು ಪಕ್ಷದ ನಾಯಕ ರೈಸ್ ಶೇಖ್ ಅವರು ಎಂವಿಎ ಬಹಿಷ್ಕಾರದ ಕರೆಯನ್ನು ಧಿಕ್ಕರಿಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
“ಬಾಬರಿ ಮಸೀದಿ ಧ್ವಂಸ ಮಾಡಿದವರನ್ನು ಅಭಿನಂದಿಸಿ ಶಿವಸೇನೆ (ಯುಬಿಟಿ) ಪತ್ರಿಕೆಯೊಂದರಲ್ಲಿ ಜಾಹೀರಾತನ್ನು ನೀಡಿದೆ. ಅವರ (ಉದ್ಧವ್ ಠಾಕ್ರೆ) ಸಹಾಯಕ ಕೂಡ ಪೋಸ್ಟ್ ಮಾಡಿದ್ದಾರೆ. “ನಾವು ಎಂವಿಎ ತೊರೆಯುತ್ತಿದ್ದೇವೆ. ನಾನು (ಸಮಾಜವಾದಿ ಪಕ್ಷದ ಅಧ್ಯಕ್ಷ) ಅಖಿಲೇಶ್ ಸಿಂಗ್ ಯಾದವ್ ಅವರೊಂದಿಗೆ ಮಾತನಾಡುತ್ತೇನೆ. ಮಹಾ ವಿಕಾಸ ಅಘಾಡಿಯಲ್ಲಿ ಯಾರಾದರೂ ಅಂತಹ ಭಾಷೆಯನ್ನು ಮಾತನಾಡಿದರೆ, ಬಿಜೆಪಿ ಮತ್ತು ಅವರ ನಡುವಿನ ವ್ಯತ್ಯಾಸವೇನು? ನಾವು ಅವರೊಂದಿಗೆ ಏಕೆ ಉಳಿಯಬೇಕು? ಎಂದು ಅಬು ಅಜ್ಮಿ ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಸಮಾಜವಾದ ಇಪಕ್ಷವು ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 103 ಸ್ಥಾನಗಳಲ್ಲಿ ಸ್ಪರ್ಧಿಸಿ 16 ಗೆದ್ದಿದೆ. 89 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಶಿವಸೇನೆ (UBT) 20 ಸ್ಥಾನಗಳನ್ನು ಗೆದ್ದರೆ, ಶರದ್ ಪವಾರ್ ನೇತೃತ್ವದ ಎನ್‌ಸಿಪಿ (NCP), 87 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 10ರಲ್ಲಿ ಗೆಲುವು ಸಾಧಿಸಿದೆ.
“ಉದ್ಧವ್ ಠಾಕ್ರೆಯವರ ಪಕ್ಷದ ಮಿಲಿಂದ್ ನಾರ್ವೇಕರ್ ಅವರು ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ ಮತ್ತು ನಾವು ಅವರಿಗೆ ಪ್ರತಿಕ್ರಿಯಿಸಿದ್ದೇವೆ. ಎಂವಿಎ ಎರಡು ಪ್ರಮುಖ ತತ್ವಗಳ ಮೇಲೆ ರಚಿಸಲಾಗಿದೆ: ಸಂವಿಧಾನವನ್ನು ರಕ್ಷಿಸುವುದು ಮತ್ತು ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯುವುದು. ಶಿವಸೇನೆ ಲೋಕಸಭೆಯಲ್ಲಿ ಮತಗಳನ್ನು ಪಡೆದಿದೆ ಮತ್ತು ಎಲ್ಲಾ ಧರ್ಮಗಳ ಜನರು ಮತ್ತು ಜಾತ್ಯತೀತ ಮನೋಭಾವದ ವ್ಯಕ್ತಿಗಳ ಬೆಂಬಲದೊಂದಿಗೆ ಎಂವಿಎ ಹೆಸರಿನಲ್ಲಿ ವಿಧಾನಸಭೆ ಚುನಾವಣೆ ಎದುರಿಸಿದ್ದೇವೆ ಎಂದು ಸಮಾಜವಾದಿ ನಾಯಕ ರೈಸ್ ಶೇಖ್ ಹೇಳಿದರು.
ಬಿಜೆಪಿ, ಏಕನಾಥ್ ಶಿಂಧೆ ಅವರ ಶಿವಸೇನೆ ಬಣ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಬಣವನ್ನು ಒಳಗೊಂಡಿರುವ ಮಹಾಯುತಿ ಮೈತ್ರಿಕೂಟವು 288 ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿದೆ. ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು, ಏಕನಾಥ ಶಿಂಧೆ ಮತ್ತು ಅಜಿತ ಪವಾರ್ ಅವರು ಡಿಸೆಂಬರ್ 5 ರಂದು ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ