ಪಾಟ್ನಾ: ಮಹಿಳಾ ಬ್ಯಾಂಕ್ ಮ್ಯಾನೇಜರ್ ಜೊತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಆಘಾತಕಾರಿ ಘಟನೆ ಬಿಹಾರದ ಪಾಟ್ನಾದ ಕೆನರಾ ಬ್ಯಾಂಕ್ ಶಾಖೆಯೊಂದರಲ್ಲಿ ನಡೆದಿದ್ದು ಈ ಘಟನೆಯದ್ದು ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ತಾನು ತೋರಿದ ದುರ್ವರ್ತನೆ ಕೃತ್ಯ ಸೆರೆ ಹಿಡಿಯುತ್ತಿದ್ದರು ಎನ್ನುವ ಕಾರಣಕ್ಕೆ ವ್ಯಕ್ತಿಯು ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೊಬೈಲ್ ಅನ್ನು ನೆಲಕ್ಕೆ ಎಸೆದು ಒಡೆದು ಹಾಕಿರುವುದು ಸಹ ಸೆರೆಯಾಗಿದೆ. ಮಹಿಳಾ ಬ್ಯಾಂಕ್ ಮ್ಯಾನೇಜರ್ ಈ ಕುರಿತಾಗಿ ಪೊಲೀಸರಿಗೆ ದೂರು ನೀಡಿದ್ದು, ವ್ಯಕ್ತಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಪಾಟ್ನಾದ ಗಾಂಧಿ ಮೈದಾನ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಶುಕ್ರವಾರ (ಡಿಸೆಂಬರ್ 6) ನಡೆದ ಈ ಘಟನೆ ನಡೆದಿದೆ ಎನ್ನಲಾಗಿದ್ದು. ಈ ಘಟನೆಯಿಂದಾಗಿ ಕೆಲಕಾಲ ಬ್ಯಾಂಕ್ನಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಆರೋಪಿಯನ್ನು ರಾಕೇಶಕುಮಾರ ಸಿಂಗ್ ಎಂದು ಗುರುತಿಸಲಾಗಿದೆ. ವೃತ್ತಿಯಿಂದ ಗುತ್ತಿಗೆದಾರನಾಗಿರುವ ಈತ ಬ್ಯಾಂಕಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದ. ಆದರೆ ಆತನ ಸಿಐಬಿಐಎಲ್ ಸ್ಕೋರ್ ನಿಗದಿತ ಪ್ರಮಾಣದಲ್ಲಿ ಇಲ್ಲದೆ ಇರುವ ಕಾರಣಕ್ಕೆ ಸಾಲವನ್ನು ಮಂಜೂರು ಮಾಡಿರಲಿಲ್ಲ.
ಸಾಲ ಮಂಜೂರು ಮಾಡದ್ದಕ್ಕೆ ಸಿಟ್ಟಿಗೆದ್ದ ಈತ, ತನ್ನ ಸಿಐಬಿಐಎಲ್ ಸ್ಕೋರ್ ಅನ್ನು ಸರಿ ಮಾಡಿ ಸಾಲ ಮಂಜೂರು ಮಾಡುವಂತೆ ಬ್ಯಾಂಕ್ ಮ್ಯಾನೇಜರ್ಗೆ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ. ಆದರೆ ಮಹಿಳಾ ಮ್ಯಾನೇಜರ್ ಬ್ಯಾಂಕಿನಿಂದ ಸಿಐಬಿಐಎಲ್ ಸ್ಕೋರ್ ಅನ್ನು ಸರಿಪಡಿಸಲು ಆಗುವುದಿಲ್ಲ ಎಂದು ಮಹಿಳೆ ಹೇಳಿದ ನಂತರ ಸಿಟ್ಟಿಗೆದ್ದ ಈತ ಬ್ಯಾಂಕ್ ಮ್ಯಾನೇಜರ್ ಕಡೆಗೆ ಕೈ ತೋರಿಸಿ ಕಿರುಚಾಡುತ್ತಿರುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ.
ಕೋಪದಲ್ಲಿ ಈತ, “ತುಂಬಾ ಬುದ್ಧಿವಂತರಂತೆ ನಟಿಸುವುದು ಬೇಡ. ಮೊದಲು ನನ್ನ ಸಿಐಬಿಐಎಲ್ ಸ್ಕೋರ್ ಅನ್ನು ಸರಿಪಡಿಸಿ. ಇಲ್ಲವಾದರೆ ನಿಮ್ಮ ಚೇಂಬರ್ ಒಳಗೆ ನುಗ್ಗಿ ನಾನೇನು ಮಾಡುತ್ತೇನೆ ಎಂಬುದನ್ನು ಕಾದು ನೋಡಿ. ಇದನ್ನೆಲ್ಲ ರೆಕಾರ್ಡ್ ಮಾಡಿ ನನಗೆ ಅವಮಾನ ಮಾಡುತ್ತಿದ್ದೀರಾ? ನಾನ್ಯಾರು ಅನ್ನುವುದು ನಿಮಗಿನ್ನೂ ತಿಳಿದಿಲ್ಲ. ಎಲ್ಲೇ ಬೇಕಾದರೂ ಹೋಗಿ ನನ್ನ ಬಗ್ಗೆ ವಿಚಾರಿಸಿ. ಹೆಚ್ಚಿನ ಬ್ಯಾಂಕ್ಗಳಲ್ಲಿ ನನ್ನ ಹೆಸರಿನಲ್ಲಿ ಸಾಲಗಳಿವೆ. ನಮ್ಮ ಮನೆಯ ಎಷ್ಟೊಂದು ಜನರು ಅಧಿಕಾರಯುತ ಸ್ಥಾನದಲ್ಲಿದ್ದಾರೆ ಗೊತ್ತಾ?” ಎಂದು ಆ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ.
ನಂತರ ಈತನ ಈ ಕೃತ್ಯವನ್ನು ಮಹಿಳೆಯು ತಮ್ಮ ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಂಡು ಸಿಟ್ಟಿಗೆದ್ದು ಆಕೆಯನ್ನು ನಿಂದಿಸಿದ್ದಾನೆ. ಜೊತೆಗೆ ಆಕೆಯ ಮೊಬೈಲ್ ಅನ್ನು ಒಡೆದು ಹಾಕಿದ್ದಾನೆ. ಮಹಿಳೆಯು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ