ಬೆಳಗಾವಿ: ಬೆಳಗಾವಿ ಸುವರ್ಣಸೌಧದ ಮುಂದೆ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ತೀವ್ರಗೊಂಡಿದ್ದು, ಮಂಗಳವಾರ ಪ್ರತಿಭಟನಾಕಾರರು ಸುವರ್ಣಸೌಧಕ್ಕೆ ನುಗ್ಗಲು ಯತ್ನಿಸಿದ್ದಾರೆ. ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಿದ್ದಾರೆ. ಇದರಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪಂಚಮಸಾಲಿ 2ಎ ಮೀಸಲಾತಿಗಾಗಿ ಪಟ್ಟು ಹಿಡಿದ ಹೋರಾಟಗಾರರು ಸುವರ್ಣಸೌಧಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಬ್ಯಾರಿಕೇಡ್ಗಳನ್ನು ಕಿತ್ತೆಸೆದು ಸುವರ್ಣಸೌಧಕ್ಕೆ ನುಗ್ಗಲು ಯತ್ನಿಸುತ್ತಿದ್ದಾರೆ. ನಂತರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ.
ಪೊಲೀಸರ ವಾಹನ ಹಾಗೂ ರಾಜಕಾರಣಿಗಳ ಕಾರುಗಳ ಮೇಲೆ ಕಲ್ಲುತೂರಾಟ ನಡೆದಿದೆ. ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದರಿಂದ ಕಿ.ಮೀ.ಗಟ್ಟಲೇ ವಾಹನ ದಟ್ಟಣೆ ಉಂಟಾಗಿದೆ.
ಕಲ್ಲು ತೂರಾಟದಿಂದ ಬಸ್, ಕಾರು ಹಾಗೂ ಪೊಲೀಸ್ ವಾಹನಗಳು ಜಖಂಗೊಂಡಿದ್ದು, ಕೆಲ ಪೊಲೀಸರಿಗೆ ಗಾಯಗಳಾಗಿವೆ ಎನ್ನಲಾಗಿದೆ.
ಸುವರ್ಣ ಸೌಧ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭದಲ್ಲಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆಯಲಾಯಿತು.
ನಾಯಕರನ್ನು ವಶಕ್ಕೆ ಪಡೆಯುತ್ತಿದ್ದಂತೆ ಕೆರಳಿದ ಪ್ರತಿಭಟನಾಕಾರರು ಪೊಲೀಸರ ಮೇಲೆ ಚಪ್ಪಲಿ ಹಾಗೂ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಲಾಠಿಚಾರ್ಜ್ ನಡೆಸಿದ್ದಾರೆ.
ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಮಾತನಾಡಿ, ಸಮುದಾಯದ ಶಾಸಕರು, ಸಂಸದರು ನಮ್ಮ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡಬೇಕು. ರಾಜ್ಯ ಸರ್ಕಾರ ಇದೇ ಅಧಿವೇಶನದಲ್ಲೇ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು. ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ