ಮುಂಬೈ: ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗದ ಕಾರಣಕ್ಕೆ ಶಿವಸೇನೆಯ ಏಕನಾಥ ಶಿಂಧೆ ಬಣದ ಶಾಸಕರೊಬ್ಬರು ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನರೇಂದ್ರ ಭೋಂಡೇಕರ್ ಅವರು ಶಿವಸೇನೆಯ ಉಪನಾಯಕ ಮತ್ತು ವಿದರ್ಭದ ಪಕ್ಷದ ಸಂಯೋಜಕರಾಗಿದ್ದರು, ಅಲ್ಲಿ ಬಿಜೆಪಿ ನೇತೃತ್ವದ ಆಡಳಿತಾರೂಢ ಮೈತ್ರಿಕೂಟದ ಮಹಾಯುತಿ 62 ಸ್ಥಾನಗಳಲ್ಲಿ 47 ಸ್ಥಾನಗಳನ್ನು ಗೆದ್ದಿದೆ.
ಆದರೆ, ಭಂಡಾರ-ಪಾವನಿ ಕ್ಷೇತ್ರದ ಶಾಸಕರಾದ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಈ ಹಿಂದೆ ಪಕ್ಷೇತರ ಶಾಸಕರಾಗಿದ್ದ ಅವರು ಸಚಿವ ಸ್ಥಾನದ ಭರವಸೆಯೊಂದಿಗೆ ಇತ್ತೀಚಿಗೆ ಶಿವಸೇನೆ ಸೇರಿದ್ದಾಗಿ ಹೇಳಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ಭೋಂಡೇಕರ್ ತನಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು. ಆದರೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ ಎಂದು ಅವರು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಮೂರು ವಾರಗಳ ನಂತರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನೂತನ ಸಂಪುಟದಲ್ಲಿ ಭಾನುವಾರ 39 ಶಾಸಕರು ಸಚಿವರಾಗಿ ನಾಗ್ಪುರದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದರಲ್ಲಿ ಹತ್ತೊಂಬತ್ತು ಮಂದಿ ಬಿಜೆಪಿಯಿಂದ, ಹನ್ನೊಂದು ಮಂದಿ ಶಿವಸೇನೆಯಿಂದ ಮತ್ತು ಒಂಬತ್ತು ಮಂದಿ ಎನ್‌ಸಿಪಿಯಿಂದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶಿವಸೇನೆಯ ಸಚಿವರ ಪಟ್ಟಿಯಲ್ಲಿ ಶಂಭುರಾಜ ದೇಸಾಯಿ, ದಾದಾಜಿ ದಗದು ಭೂಸೆ, ಸಂಜಯ ರಾಥೋಡ್, ಉದಯ ಸಾಮಂತ್, ಗುಲಾಬ್ ರಾವ್ ಪಾಟೀಲ ಮತ್ತು ಸಂಜಯ ಶಿರಸಾಟ್ ಸೇರಿದ್ದಾರೆ.
ಭೋಂಡೇಕರ್ ಅವರಲ್ಲದೆ, ಆರ್‌ಪಿಐ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ರಾಮದಾಸ ಅಠವಳೆ ಕೂಡ ತಮ್ಮ ಪಕ್ಷಕ್ಕೆ ಸಚಿವ ಸ್ಥಾನ ಪಡೆಯುವ ಭರವಸೆಯಲ್ಲಿದ್ದರು, ಆದರೆ ಫಡ್ನವಿಸ್ ತನ್ನ ಮಾತನ್ನು ಉಳಿಸಿಕೊಳ್ಳದ ಕಾರಣ ಅವರು ಶಾ ಮತ್ತು ನಡ್ಡಾ ಅವರೊಂದಿಗೆ ಮಾತನಾಡುತ್ತೇನೆ ಎಂದು ಅವರು ಸಾರ್ವಜನಿಕವಾಗಿ ಹೇಳಿದರು.
ಸಂಪುಟದಲ್ಲಿ ಸ್ಥಾನ ಪಡೆಯದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಛಗನ್ ಭುಜಬಲ್ ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ನಾಗ್ಪುರದಲ್ಲಿ ನಡೆದ ಪಕ್ಷದ ಕೂಟದಲ್ಲಿ ಹಾಜರಿರಲಿಲ್ಲ.
ಏಕನಾಥ ಶಿಂಧೆ ಸರ್ಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ದೀಪಕ ಕೇಸರ್ಕರ್ ಅವರು ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಕರೆ ಬಂದವರು ಹೋದರು ಎಂದು ಸುದ್ದಿಗಾರರಿಗೆ ತಿಳಿಸಿದರು. ನಾಗ್ಪುರದ ಸಾಯಿಬಾಬಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಸಕನಾಗಿ ನಾನು ಅಧಿವೇಶನಕ್ಕೆ ಹಾಜರಾಗಬೇಕು, ಅದನ್ನು ಮಾಡುತ್ತೇನೆ’ ಎಂದು ಹೇಳಿದರು.
ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ 235 ಸ್ಥಾನಗಳನ್ನು ಗೆದ್ದು ಭರ್ಜರಿ ಗೆಲುವು ಸಾಧಿಸಿತ್ತು. ಬಿಜೆಪಿ 132 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಶಿವಸೇನೆ ಮತ್ತು ಎನ್‌ಸಿಪಿ 57 ಮತ್ತು 41 ಸ್ಥಾನಗಳನ್ನು ಗಳಿಸಿವೆ.
ನಿಮ್ಮ ಕಾಮೆಂಟ್ ಬರೆಯಿರಿ