ಮೈಸೂರು : ‘ಮುಡಾ ನಿವೇಶನಗಳ ಹಂಚಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ನ್ಯಾಯಾಲಯದಲ್ಲಿ ನಾನು ಸಲ್ಲಿಸಿರುವ ಅರ್ಜಿ ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಕಡೆಯವರು ಎಂದು ಹೇಳಿಕೊಂಡ ಇಬ್ಬರು ನನಗೆ ಹಾಗೂ ನನ್ನ ಕುಟುಂಬಕ್ಕೆ ಹಣದ ಆಮಿಷ ಒಡ್ಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಕಡೆಯವರು ಎಂದು ಹೇಳಿಕೊಂಡ ಇಬ್ಬರು ನನ್ನ ಮನೆಗೆ ಬಂದಿದ್ದರು. ಪಾರ್ವತಿ ಅವರ ಕೆಲಸಗಳನ್ನು ನಾವೇ ನೋಡಿಕೊಳ್ಳುತ್ತಿದ್ದೇವೆ. ಅವರು ಈ ಪ್ರಕರಣದಿಂದ ಮಾನಸಿಕವಾಗಿ ನೊಂದಿದ್ದಾರೆ. ಹೀಗಾಗಿ ಸಿಬಿಐ ತನಿಖೆಗೆ ಕೋರಿರುವ ಪ್ರಕರಣವನ್ನು ಹಿಂಪಡೆಯಿರಿ ಎಂದು ಹೇಳಿದ್ದರು. ಆದರೆ ನಾನು ಒಪ್ಪಲಿಲ್ಲ’ ಎಂದು ಅವರು ಹೇಳಿದ್ದಾರೆ.
ನಂತರ ಇದರ ಮಾರನೇ ದಿನ ಕೆ.ಆರ್. ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಯಿತು. ನಂತರ ನಾನು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ವಕೀಲರ ಭೇಟಿಗೆ ಬೆಂಗಳೂರಿಗೆ ತೆರಳಿದೆ. ನಂತರ ಡಿ. 15ರಂದು ಮತ್ತೆ ನನ್ನ ಮನೆಗೆ ಬಂದ ಇಬ್ಬರು ನನ್ನ ಮಗನ ಜೊತೆ ಮಾತನಾಡಿ, ಪ್ರಕರಣ ಹಿಂಪಡೆಯಲು ಇದೇ ರೀತಿ ವ್ಯಕ್ತಿಯೊಬ್ಬರಿಗೆ ಮೂರು ಕೋಟಿ ರೂ. ನೀಡಿದ್ದೇವೆ ಎಂದು ಹೇಳಿದ್ದಾರೆ. ನಿಮ್ಮ ತಂದೆ ನ್ಯಾಯಾಲಯದಲ್ಲಿ ಪ್ರಕರಣ ಹಿಂದಕ್ಕೆ ಪಡೆಯಲು ಒಪ್ಪಿದರೆ ಹಣ ನೀಡುವ ಆಮಿಷ ಒಡ್ಡಿದ್ದಾರೆ. ಆದರೆ ನನ್ನ ಮಗ ಒಪ್ಪಲಿಲ್ಲ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
‘ಈ ಸಂಬಂಧ ನಾನು ಮಂಗಳವಾರ ಬೆಂಗಳೂರಿನಲ್ಲಿ ಇ.ಡಿ. ಕಚೇರಿಗೆ ತೆರಳಿ ದೂರು ನೀಡಿದ್ದೇನೆ. ಇಂದು ಲೋಕಾಯುಕ್ತ ಎಸ್.ಪಿ. ಅವರ ಬಳಿ ದೂರು ದಾಖಲಿಸುತ್ತಿದ್ದೇನೆ. ಆರೋಪಿಗಳು ನನ್ನ ಮನೆಗೆ ಬಂದ ಹಾಗೂ ನನ್ನ ಮಗನ ಜೊತೆ ಮಾತನಾಡುತ್ತಿರುವ ದೃಶ್ಯಗಳು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಅವುಗಳನ್ನು ಸಾಕ್ಷ್ಯವನ್ನಾಗಿ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ