ಭೋಪಾಲ್: ಆದಾಯ ತೆರಿಗೆ ಇಲಾಖೆ ಮತ್ತು ಲೋಕಾಯುಕ್ತ ಪೊಲೀಸರು ಭೋಪಾಲ್‌ನಲ್ಲಿ ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಕೋಟ್ಯಂತರ ಮೌಲ್ಯದ ಚಿನ್ನ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ.
ಬಿಟ್ಟುಹೋದ ಇನ್ನೋವಾ ಕಾರಿನಲ್ಲಿ ₹ 40 ಕೋಟಿಗೂ ಹೆಚ್ಚು ಮೌಲ್ಯದ 52 ಕೆಜಿ ಚಿನ್ನದ ಬಿಸ್ಕತ್‌ಗಳು ಮತ್ತು ₹ 10 ಕೋಟಿ ನಗದು ಪತ್ತೆಯಾಗಿರುವುದು ಗಮನ ಸೆಳೆದಿದೆ. ನಗರದ ಹೊರವಲಯದಲ್ಲಿರುವ ಮೆಂಡೋರಿ ಅರಣ್ಯದಲ್ಲಿ ಅರಣ್ಯ ಮಾರ್ಗವಾಗಿ ಚಿನ್ನ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಕಾರು ಪತ್ತೆಯಾಗಿದೆ. 100 ಪೊಲೀಸರು ಮತ್ತು 30 ಪೊಲೀಸ್ ವಾಹನಗಳ ತಂಡವು ಕಾರನ್ನು ಸುತ್ತುವರೆದಿದೆ, ಆದರೆ ಶೋಧ ನಡೆಸಿದಾಗ ಎರಡು ಬ್ಯಾಗ್‌ಗಳನ್ನು ಹೊರತುಪಡಿಸಿ ಒಳಗೆ ಯಾರೂ ಕಂಡುಬಂದಿಲ್ಲ. ಬ್ಯಾಗ್‌ಗಳಲ್ಲಿ ಚಿನ್ನ ಮತ್ತು ಹಣದ ಕಟ್ಟುಗಳಿದ್ದವು.
ಈ ಕಾರು ಗ್ವಾಲಿಯರ್ ನಿವಾಸಿ ಚೇತನ್ ಗೌರ್ ಎಂಬವರಿಗೆ ಸೇರಿದ್ದು ಎನ್ನಲಾಗಿದೆ. ಸ್ವತ್ತುಗಳ ಮೂಲವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.
ಭೋಪಾಲ್‌ನ ಐಷಾರಾಮಿ ಅರೇರಾ ಕಾಲೋನಿಯಲ್ಲಿರುವ ಚೇತನ್ ಗೌರ್ ಅವರ ಆಪ್ತ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) ಮಾಜಿ ಕಾನ್‌ಸ್ಟೆಬಲ್ ಸೌರಭ ಶರ್ಮಾ ಅವರ ಮನೆ ಮೇಲೆ ಲೋಕಾಯುಕ್ತ ತಂಡ ಗುರುವಾರ ದಾಳಿ ನಡೆಸಿತ್ತು. ದಾಳಿ ವೇಳೆ ಅಧಿಕಾರಿಗಳು ಒಂದು ಕೋಟಿಗೂ ಹೆಚ್ಚು ನಗದು, ಅರ್ಧ ಕಿಲೋಗ್ರಾಂ ಚಿನ್ನ ಮತ್ತು ವಜ್ರಗಳು, ಬೆಳ್ಳಿಯ ತುಂಡುಗಳು ಮತ್ತು ಆಸ್ತಿ ದಾಖಲೆಗಳನ್ನು ಪತ್ತೆ ಮಾಡಿದ್ದಾರೆ. ಎರಡು ದಿನಗಳಿಂದ ಭೋಪಾಲ್‌ನಲ್ಲಿ ಶೋಧ ಕಾರ್ಯಾಚರಣೆಯ ಭಾಗವಾಗಿ ಈ ದಾಳಿಗಳು ನಡೆದಿದ್ದು, ಈ ಸಂದರ್ಭದಲ್ಲಿ ಪ್ರಮುಖ ಬಿಲ್ಡರ್‌ಗಳ ಮೇಲೆ ದಾಳಿ ಮಾಡಲಾಗಿದೆ.
ಬಿಲ್ಡರ್ ಗಳ ಮೇಲೆ ನಡೆದ ದಾಳಿಯಲ್ಲಿ 3 ಕೋಟಿ ರೂಪಾಯಿ ನಗದು, ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ, ಭೂಮಿ ಮತ್ತು ಆಸ್ತಿ ಕಬಳಿಕೆಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಶರ್ಮಾ ಅವರಿಗೆ ಸೇರಿದ ಸುಮಾರು 10 ಲಾಕರ್‌ಗಳು ಮತ್ತು 5 ಎಕರೆ ಜಮೀನು ಖರೀದಿಸಿದ ದಾಖಲೆಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ