ಜೈಪುರ : ಶುಕ್ರವಾರ ಬೆಳಗ್ಗೆ ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಪೆಟ್ರೋಲ್ ಪಂಪ್‌ನ ಮುಂದೆ ಗ್ಯಾಸ್ ಟ್ಯಾಂಕರ್ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಸ್ಫೋಟ ಸಂಭವಿಸಿ ಉಂಟಾದ ಬೆಂಕಿ ಅನಾಹುತದಲ್ಲಿ 11 ಜನರು ಸಾವಿಗೀಡಾಗಿದ್ದಾರೆ ಹಾಗೂ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳು ಗ್ಯಾಸ್ ಟ್ಯಾಂಕರ್ ಹೆದ್ದಾರಿಯಲ್ಲಿ ಅನೇಕ ವಾಹನಗಳಿಗೆ ಡಿಕ್ಕಿ ಹೊಡೆದ ಕೆಲವೇ ಕ್ಷಣಗಳಲ್ಲಿ ದಿಢೀರ್ ಬೆಂಕಿಯ ಜ್ವಾಲೆಗಳು ಆವರಿಸಿದ್ದನ್ನು ತೋರಿಸಿವೆ. ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೆ ಹರಡಿ ಮುಗಿಲೆತ್ತರಕ್ಕೆ ವ್ಯಾಪಿಸಿದ ಭಯಾನಕ ದೃಶ್ಯಗಳು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಬೆಂಕಿಯ ಜ್ವಾಲೆಗೆ ಕನಿಷ್ಠ 30 ವಾಹನಗಳು ಸುಟ್ಟು ಕರಕಲಾಗಿವೆ.
ಸಿಸಿಟಿವಿ ದೃಶ್ಯಗಳು ಬೆಂಕಿಯ ಜ್ವಾಲೆಯು ಹೆದ್ದಾರಿಯ ಸಮೀಪವಿರುವ ಮನೆಗಳಿಗೆ ಹಾಗೂ ಕಟ್ಟಡಗಳಿಗೆ ಆವರಿಸಿರುವುದನ್ನು ತೋರಿಸಿದೆ. ಬೆಂಕಿ ಜ್ವಾಲೆಗೆ ಸಿಲುಕಿ ಈವರೆಗೆ 11 ಜನರು ಮೃತಪಟ್ಟಿದ್ದಾರೆ. ಬೆಂಕಿಯ ಜ್ವಾಲೆಗಳು ಸುಮಾರು ಒಂದು ಕಿಲೋಮೀಟರ್ ದೂರದಿಂದಲೂ ಗೋಚರಿಸಿವೆ ಎಂದು ಹೇಳಲಾಗಿದೆ. ನಂತರ ದಟ್ಟವಾದ ಕಪ್ಪು ಹೊಗೆಯು ಆಕಾಶದಲ್ಲಿ ಆವರಿಸಿತು. ತಕ್ಷಣವೇ ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳು ಅಪಘಾತದ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ಕೆನ್ನಾಲಗಗೆ ಸಿಲುಕಿ ಕನಿಷ್ಠ 30 ವಾಹನಗಳಿಗೆ ಹಾನಿಯಾಗಿದೆ.
ಏತನ್ಮಧ್ಯೆ, ಅಪಘಾತ ಸಂಭವಿಸಿದಾಗ ಗ್ಯಾಸ್ ಟ್ಯಾಂಕರ್ ಹಿಂದಿದ್ದ ಬಸ್‌ನಲ್ಲಿದ್ದ ಪ್ರಯಾಣಿಕರ ವಿವರಗಳನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ. ಹೆದ್ದಾರಿ ಪಕ್ಕದಲ್ಲಿರುವ ಸಂಸ್ಥೆಗಳಿಗೆ ಬೆಂಕಿಯಿಂದ ಉಂಟಾದ ಹಾನಿಯ ಬಗ್ಗೆಯೂ ನಿರ್ಣಯಿಸಲಾಗುತ್ತಿದೆ.
ರಾಜಸ್ಥಾನ ಮುಖ್ಯಮಂತ್ರಿ ಭಜನಲಾಲ ಶರ್ಮಾ ಮತ್ತು ಆರೋಗ್ಯ ಸಚಿವ ಗಜೇಂದ್ರ ಸಿಂಗ್ ಖಿಮ್ಸರ್ ಅವರು ಗಾಯಾಳುಗಳನ್ನು ದಾಖಲಿಸಿರುವ ಎಸ್‌ಎಂಎಸ್ ಆಸ್ಪತ್ರೆಗೆ ಭೇಟಿ ನೀಡಿದ್ದು, 40 ಕ್ಕೂ ಹೆಚ್ಚು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಕರೆತರಲಾದ ಸುಮಾರು ಅರ್ಧದಷ್ಟು ಗಾಯಾಳುಗಳ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಖಿಮ್ಸರ್ ಸುದ್ದಿಗಾರರಿಗೆ ತಿಳಿಸಿದರು. ಇದಲ್ಲದೆ, ಅಪಘಾತ ಸ್ಥಳದಿಂದ ಎಸ್‌ಎಂಎಸ್ ಆಸ್ಪತ್ರೆಯವರೆಗೆ ‘ಹಸಿರು ಕಾರಿಡಾರ್’ ಅನ್ನು ಸ್ಥಾಪಿಸಲಾಗಿದೆ ಎಂದರು.
ಪ್ರತ್ಯಕ್ಷದರ್ಶಿಗಳು ಭೀಕರ ಅಪಘಾತ ಸಂಭವಿಸಿದ ಕ್ಷಣದ ಬಗ್ಗೆ ತಿಳಿಸಿದ್ದಾರೆ. ತಾವು ಸಾವಿನ ಕಪಿಮುಷ್ಠಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾಗಿ ಹೇಳಿದ್ದಾರೆ.
ರಾಜಸಮಂದ್‌ನಿಂದ ಜೈಪುರಕ್ಕೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಬೆಳಿಗ್ಗೆ 5:30 ರ ಸುಮಾರಿಗೆ ಭಾರಿ ಸ್ಫೋಟದ ಶಬ್ದದ ನಂತರ ಸ್ಥಳವೇ ಅಲುಗಾಡಿದಂತೆ ಭಾಸವಾಯಿತು. ನಂತರ ಬಸ್ ಇದ್ದಕ್ಕಿದ್ದಂತೆ ನಿಂತಿತು ಎಂದು ಅವರು ಹೇಳಿದರು.
“ಬಸ್ಸಿನ ಸುತ್ತಲೂ ಬೆಂಕಿ ಕಾಣಿಸಿಕೊಂಡಿತು. ಬಸ್ಸಿನ ಬಾಗಿಲು ಲಾಕ್ ಆಗಿದ್ದರಿಂದ ತಾನು ಸೇರಿದಂತೆ ಹಲವರು ತಮ್ಮ ಜೀವ ಉಳಿಸಿಕೊಳ್ಳಲು ಅವರು ಕಿಟಕಿಯನ್ನು ಒಡೆದು ಹೊರಬಂದಿದ್ದಾರೆ ಎಂದು ತಿಳಿಸಿದರು. “ನಮ್ಮ ಜೊತೆಗೆ, ಸುಮಾರು 7-8 ಜನರು ಕಿಟಕಿಯಿಂದ ಹಾರಿದರು. ಒಂದರ ಹಿಂದೆ ಒಂದರಂತೆ ನಿರಂತರ ಸ್ಫೋಟಗಳು ಸಂಭವಿಸಿದವು. ಹತ್ತಿರದಲ್ಲೇ ಪೆಟ್ರೋಲ್ ಪಂಪ್ ಇತ್ತು ಎಂದು ಹೇಳಿದರು.
100-200 ಮೀಟರ್‌ನ ಸಂಪೂರ್ಣ ಲೇನ್ ಸುಟ್ಟುಹೋಗಿದೆ ಎಂದು ಇನ್ನೊಬ್ಬ ವ್ಯಕ್ತಿ ಹೇಳಿದರು.“ ಬೆಳಿಗ್ಗೆ 5:30 ಕ್ಕೆ ಎಚ್ಚರವಾದಾಗ, ನಮಗೆ ಸ್ಫೋಟದ ಶಬ್ದ ಕೇಳಿಸಿತು. ಸಾಧ್ಯವಾದವರು ಬಸ್‌ನಿಂದ ಜಿಗಿದರು ಮತ್ತು ಸಾಧ್ಯವಾಗದವರು ಬೆಂಕಿ ಜ್ವಾಲೆಯಲ್ಲಿ ಸಿಲುಕುವಂತಾಯಿತು ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ