ನಟ ಅಲ್ಲು ಅರ್ಜುನ್ ಮನೆಗೆ ನುಗ್ಗಿ ಹಾನಿಗೊಳಿಸಿದ ಗುಂಪು ; 6 ಜನರ ಬಂಧನ

ಹೈದರಾಬಾದ್‌: ಹೈದರಾಬಾದ್‌ನಲ್ಲಿರುವ ತೆಲುಗು ನಟ ಅಲ್ಲು ಅರ್ಜುನ್ ಅವರ ಜೂಬಿಲಿ ಹಿಲ್ಸ್ ನಿವಾಸಕ್ಕೆ ಭಾನುವಾರ ಉಸ್ಮಾನಿಯಾ ವಿಶ್ವವಿದ್ಯಾಲಯದ ಜಂಟಿ ಕ್ರಿಯಾ ಸಮಿತಿಯ ಹಲವಾರು ಸದಸ್ಯರು ನುಗ್ಗಿ ಆಸ್ತಿಗೆ ಹಾನಿ ಮಾಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ವಿಶ್ವವಿದ್ಯಾನಿಲಯದ ಜಂಟಿ ಕ್ರಿಯಾ ಸಮಿತಿಯ (ಜೆಎಸಿ) 6 ಸದಸ್ಯರನ್ನು ಬಂಧಿಸಿದ್ದಾರೆ ಹಾಗೂ ನಂತರ ಅವರನ್ನು ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು ವರದಿಯಾಗಿದೆ.
ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಜೆಎಸಿಯ ಹಲವು ಮುಖಂಡರನ್ನು ಒಳಗೊಂಡ ಗುಂಪು, ನಟ ಅಲ್ಲು ಅರ್ಜುನ್ ಮನೆಗೆ ಬಲವಂತವಾಗಿ ನುಗ್ಗಲು ಪ್ರಯತ್ನಿಸಿತು, ಡಿಸೆಂಬರ್ 4 ರಂದು ಹೈದರಾಬಾದಿನ ಸಂಧ್ಯಾ ಚಲನಚಿತ್ರ ಮಂದಿರದಲ್ಲಿ ಪುಷ್ಪಾ-2 ಚಲನಚಿತ್ರ ಪ್ರದರ್ಶನದ ವೇಳೆ ಕಾಲ್ತುಳಿತದಲ್ಲಿ ಸಾವಿಗೀಡಾದ 35 ವರ್ಷದ ಮಹಿಳೆಯ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡುವಂತೆ ಅವರು ಒತ್ತಾಯಿಸಿದರು. ಇತ್ತೀಚೆಗೆ ಬಿಡುಗಡೆಯಾದ “ಪುಷ್ಪ 2: ದಿ ರೂಲ್” ನ ಪ್ರಥಮ ಪ್ರದರ್ಶನಕ್ಕೆ ನಟ ಅಲ್ಲು ಅರ್ಜುನ್‌ ಅವರು ಥೇಯಟರ್‌ಗೆ ಆಗಮಿಸಿದ ವೇಳೆ ಕಾಲ್ತುಳಿತ ಸಂಭವಿಸಿತ್ತು.

ಘಟನೆಯ ವೀಡಿಯೊದಲ್ಲಿ ಹಲವರು ಅಲ್ಲು ಅರ್ಜುನ್‌ ಮನೆಯೊಳಗೆ ನುಗ್ಗಿ ಆಸ್ತಿಗೆ ಹಾನಿ ಮಾಡುವುದನ್ನು ತೋರಿಸಿದೆ. ಆವರಣದೊಳಗಿದ್ದ ಹೂವಿನ ಕುಂಡಗಳನ್ನೂ ಗುಂಪು ನಾಶಪಡಿಸಿದೆ.
ಪೊಲೀಸರ ಪ್ರಕಾರ, ಪ್ರತಿಭಟನಾಕಾರರು ಘೋಷಣಾ ಫಲಕಗಳನ್ನು ಹಿಡಿದುಕೊಂಡು ಕಾಂಪೌಂಡ್ ಏರಿದರು. ಮನೆಯ ಕಡೆಗೆ ಟೊಮೆಟೊ ಎಸೆದರು. ಅಲ್ಲು ಅರ್ಜುನ್ ಅವರ ಭದ್ರತಾ ಸಿಬ್ಬಂದಿ ಆಕ್ಷೇಪಿಸಿ ಗೋಡೆಯಿಂದ ಕೆಳಗೆ ಇಳಿಯುವಂತೆ ಸೂಚಿಸಿದಾಗ ವಾಗ್ವಾದ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದಾಗ ಅಲ್ಲು ಅರ್ಜುನ್ ತಮ್ಮ ನಿವಾಸದಲ್ಲಿ ಇರಲಿಲ್ಲ ಎನ್ನಲಾಗಿದೆ. ಮನೆ ಆವರಣ ನುಗ್ಗಿ ಹಾನಿ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ.
ಏತನ್ಮಧ್ಯೆ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ದಾಳಿಯನ್ನು ಖಂಡಿಸಿದ್ದಾರೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ, “ನಾವು ಸಂಯಮದಿಂದ ವರ್ತಿಸುವ ಸಮಯ ಬಂದಿದೆ, ಈ ಸಮಯದಲ್ಲಿ ನಾವು ಪ್ರತಿಕ್ರಿಯಿಸಬಾರದು, ಪೊಲೀಸರು ದಾಳಿಕೋರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಅವರನ್ನು ಕರೆದೊಯ್ದಿದ್ದಾರೆ, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಥಿಯೇಟರ್‌ ನಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆಯ ನಂತರ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದರು, ಆದರೆ ಅದೇ ದಿನ ತೆಲಂಗಾಣ ಹೈಕೋರ್ಟ್ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿತು. ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಥಿಯೇಟರ್ ಆಡಳಿತದ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement