ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ವಾಣಿಜ್ಯೋದ್ಯಮಿ, ಸಾಹಸೋದ್ಯಮ ಬಂಡವಾಳಶಾಹಿ ಮತ್ತು ಲೇಖಕ ಶ್ರೀರಾಮ ಕೃಷ್ಣನ್ (Sriram Krishnan) ಅವರನ್ನು ಕೃತಕ ಬುದ್ಧಿಮತ್ತೆಯ ಹಿರಿಯ ಶ್ವೇತಭವನದ (White House) ನೀತಿ ಸಲಹೆಗಾರರಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ನೇಮಿಸಿದ್ದಾರೆ.
ಈ ಬಗ್ಗೆ ಭಾನುವಾರ ಅಧಿಕೃತವಾಗಿ ಪ್ರಕಟಿಸಿರುವ ಡೊನಾಲ್ಡ್ ಟ್ರಂಪ್ ಅವರು, ಶ್ರೀರಾಮ ಕೃಷ್ಣನ್ ಅವರು ಶ್ವೇತ ಭವನದ ವಿಜ್ಞಾನ ಮತ್ತು ತಂತ್ರಜ್ಞಾನ ಕಚೇರಿಯಲ್ಲಿ ಕೃತಕ ಬುದ್ಧಿ ಮತ್ತೆಯ ಹಿರಿಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಮೈಕ್ರೋಸಾಫ್ಟ್, ಟ್ವಿಟರ್, ಯಾಹೂ, ಫೇಸ್‌ಬುಕ್ ಮತ್ತು ಸ್ನ್ಯಾಪ್‌ನಲ್ಲಿ ಪ್ರಾಡಕ್ಟ್ ತಂಡಗಳನ್ನು ಮುನ್ನಡೆಸಿರುವ ಕೃಷ್ಣನ್, ವೈಟ್ ಹೌಸ್ AI ಮತ್ತು ಕ್ರಿಪ್ಟೋ ಝಾರ್ ಆಗಿರುವ ಡೇವಿಡ್ ಸ್ಯಾಕ್ಸ್ ಅವರ ಜೊತೆ ಕೆಲಸ ಮಾಡಲಿದ್ದಾರೆ.
ನೇಮಕಾತಿಗೆ ಪ್ರತಿಕ್ರಿಯಿಸಿದ ಶ್ರೀರಾಮ ಕೃಷ್ಣನ್ ಅವರು, “ನಮ್ಮ ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ಡೇವಿಡ್ ಸ್ಯಾಕ್ಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಶ್ರೀರಾಮ ಕೃಷ್ಣನ್ ಅವರ ನೇಮಕವನ್ನು ಭಾರತೀಯ ಅಮೆರಿಕನ್ ಸಮುದಾಯ ಸ್ವಾಗತಿಸಿದೆ. “ನಾವು ಶ್ರೀರಾಮ ಕೃಷ್ಣನ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ ಮತ್ತು ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವೈಟ್ ಹೌಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಪಾಲಿಸಿಯಲ್ಲಿ ಹಿರಿಯ ನೀತಿ ಸಲಹೆಗಾರರಾಗಿ ನೇಮಿಸಿರುವುದಕ್ಕೆ ಸಂತೋಷಪಡುತ್ತೇವೆ” ಎಂದು ಇಂಡಿಯಾಸ್ಪೋರಾದ ಕಾರ್ಯನಿರ್ವಾಹಕ ನಿರ್ದೇಶಕ ಸಂಜೀವ ಜೋಶಿಪುರ ಹೇಳಿದ್ದಾರೆ.
ಮತ್ತೊಬ್ಬ ಭಾರತೀಯ ಮೂಲದ ಉದ್ಯಮಿ ವಿವೇಕ ರಾಮಸ್ವಾಮಿ ಅವರಿಗೆ ಟ್ರಂಪ್ ಸರ್ಕಾರದಲ್ಲಿ ಸರ್ಕಾರದ ದಕ್ಷತಾ ಇಲಾಖೆಯ ನೇತೃತ್ವ ನೀಡಲಾಗಿದೆ. ಎಲಾನ್ ಮಸ್ಕ್ ಹಾಗೂ ರಾಮಸ್ವಾಮಿ ಅವರಿಗೆ ಖರ್ಚು ವೆಚ್ಚವನ್ನ ಕಡಿತಗೊಳಿಸಲು ಟಾಸ್ಕ್ ನೀಡಲಾಗಿದೆ. ಅಮೆರಿಕದ ಗುಪ್ತಚರ ಇಲಾಖೆಯ ನಿರ್ದೇಶಕರನ್ನಾಗಿ ಟ್ರಂಪ್ ಮತ್ತೊಬ್ಬ ಭಾರತದ ಮೂಲದ ತುಳಸಿ ಗಬಾರ್ಡ್ ಅವರನ್ನು ನೇಮಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ