“…..ಕಾಂಗ್ರೆಸ್ ಹಿಂದೆ ಸರಿಯಲು ಸಿದ್ಧವಾಗಿರಬೇಕು “: ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಬಗ್ಗೆ ಮಣಿಶಂಕರ ಅಯ್ಯರ್ ಮಹತ್ವದ ಹೇಳಿಕೆ

ನವದೆಹಲಿ: ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್‌ನ ನಾಯಕನ ಸ್ಥಾನದ ಪಾತ್ರವನ್ನು ಬಿಟ್ಟುಕೊಡಲು ಕಾಂಗ್ರೆಸ್ ಸಿದ್ಧವಾಗಿರಬೇಕು ಎಂದು ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ ಅಯ್ಯರ್ ಹೇಳಿದ್ದಾರೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಇಂಡಿಯಾ ಬ್ಲಾಕ್‌ ಅನ್ನು ಬೇರೆ ಯಾವುದೇ ಪಕ್ಷ ಮುನ್ನಡೆಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಇದು ಸೂಕ್ತ ಪ್ರಶ್ನೆ ಎಂದು ನಾನು ಭಾವಿಸುವುದಿಲ್ಲ. ಕಾಂಗ್ರೆಸ್ ಯಾವಾಗಲೂ ಉನ್ನತ ನಾಯಕತ್ವದ ಸ್ಥಾನವನ್ನು ಹೊಂದುವ ಅಗತ್ಯವಿಲ್ಲ., ಕಾಂಗ್ರೆಸ್ ಮೈತ್ರಿಕೂಟದ ನಾಯಕ ಸ್ಥಾನದಿಂದ ಹಿಂದೆ ಸರಿಯಲು ಸಿದ್ಧವಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಯಾರು ನಾಯಕರಾಗಲು ಬಯಸುತ್ತಾರೋ ಅವರು ಇರಲಿ. ನಾಯಕಿ ಮಮತಾ ಬ್ಯಾನರ್ಜಿಯಲ್ಲಿ ಸಾಮರ್ಥ್ಯವಿದೆ … ಮೈತ್ರಿಕೂಟದ ಇತರ ನಾಯಕರಲ್ಲಿಯೂ ಸಾಮರ್ಥ್ಯವಿದೆ ಎಂದು ಅವರು ಹೇಳಿದ್ದಾರೆ.

“ಆದ್ದರಿಂದ, ಇಂಡಿಯಾ ಮೈತ್ರಿಕೂಟದ ನಾಯಕರು ಯಾರಾಗುತ್ತಾರೆ ಎಂಬ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ನಾಯಕನ ಸ್ಥಾನ ಯಾವಾಗಲೂ ಪ್ರಮುಖವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಕಾಂಗ್ರೆಸ್‌ ಯಾವಾಗಲೂ ಪ್ರಮುಖವಾದ ಒಂದು ಪಕ್ಷವೇ ಆಗಿರುತ್ತದೆ. ಇಂಡಿಯಾ ಬ್ಲಾಕ್‌ನಲ್ಲಿ ರಾಹುಲ್ (ಗಾಂಧಿ) ಅವರನ್ನು ಮೈತ್ರಿಕೂಟದ ಅಧ್ಯಕ್ಷರಾಗಿ ಪರಿಗಣಿಸುವುದಕ್ಕಿಂತ ಹೆಚ್ಚಿನ ಗೌರವದಿಂದ ಅವರನ್ನು ನಡೆಸಿಕೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು 83 ವರ್ಷ ವಯಸ್ಸಿನ ಮಣಿಶಂಕರ ಅಯ್ಯರ್‌ ಹೇಳಿದ್ದಾರೆ.
ಅವರು ತಮ್ಮ ಆತ್ಮಚರಿತ್ರೆ ಮಾರ್ವರಿಕ್‌ ಇನ್‌ ಪಾಲಿಟಿಕ್ಸ್‌ ಎರಡನೇ ಸಂಪುಟ ಬಿಡುಗಡೆ ಮಾಡಿದ್ದಾರೆ. ಹಾಗೂ ಬಿಜೆಪಿಯನ್ನು ಎದುರಿಸಲು ಕಳೆದ ವರ್ಷ ರಚನೆಯಾದ ವಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಬ್ಲಾಕ್‌ನಲ್ಲಿ ನಾಯಕತ್ವದ ಕುರಿತಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಮಣಿಶಂಕರ ಅಯ್ಯರ್‌ ಅವರ ಈ ಹೇಳಿಕೆಗಳು ಬಂದಿವೆ.

ಪ್ರಮುಖ ಸುದ್ದಿ :-   ವೀಡಿಯೊ...| "ನಮಗೆ ಪ್ರತಿಕ್ರಿಯಿಸಲು 30-45 ಸೆಕೆಂಡುಗಳು ಮಾತ್ರ ಸಮಯ ಇತ್ತು": ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿ ಬಗ್ಗೆ ಪಾಕ್ ಪ್ರಧಾನಿ ಸಲಹೆಗಾರ

ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ತಂತ್ರವು ಉತ್ತಮವಾಗಿ ಕಾರ್ಯನಿರ್ವಹಿಸಿತು ಮತ್ತು ಆಡಳಿತಾರೂಢ ಬಿಜೆಪಿಯು ಬಹುಮತದ ಬೇಕಾದ ಸಂಖ್ಯೆಗಿಂತ ಕಡಿಮೆ ಸ್ಥಾನಗಳನ್ನು ಪಡೆಯಿತು.
ಕಾಂಗ್ರೆಸ್ ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ನಂತರ, ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್‌ ಪಾರ್ಟಿಯ ಕಾರ್ಯವೈಖರಿ ಬಗ್ಗೆ ಟೀಕಿಸಿದರು. ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳ ಮೈತ್ರಿಕೂಟದಲ್ಲಿ “ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯಬೇಕಾಗಿದೆ” ಎಂದು ಅವರು ಹೇಳಿದರು. ಹಾಗೂ “ಅವಕಾಶ ನೀಡಿದರೆ, ಅದರ ಸುಗಮ ಕಾರ್ಯನಿರ್ವಹಣೆಯನ್ನು ನಾನು ಖಚಿತಪಡಿಸಿಕೊಳ್ಳುತ್ತೇನೆ. ನಾನು ಬಂಗಾಳದಿಂದ ಹೊರಗೆ ಹೋಗಲು ಬಯಸುವುದಿಲ್ಲ, ಆದರೆ ನಾನು ಅದನ್ನು ಬಂಗಾಳದಿಂದಲೇ ನಿರ್ವಹಿಸಬಹುದು ಎಂದು ಹೇಳಿದರು.
ಇದಕ್ಕೆ ಎನ್‌ಸಿಪಿ, ಆರ್‌ಜೆಡಿ, ಉದ್ಧವ್‌ ಠಾಕ್ರೆಯ ಶಿವಸೇನೆ, ಸಮಾಜವಾದಿ ಪಕ್ಷಗಳು ಬೆಂಬಲ ಸೂಚಿಸಿದವು.

3 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement