ಲಕ್ನೋ: ಪಂಜಾಬಿನ ಗುರುದಾಸಪುರದ ಪೊಲೀಸ್ ಪೋಸ್ಟ್ ಮೇಲೆ ಗ್ರೆನೇಡ್ ದಾಳಿ ನಡೆಸಿದ ಆರೋಪ ಹೊತ್ತಿದ್ದ ಮೂವರು ಖಲಿಸ್ತಾನಿ ಭಯೋತ್ಪಾದಕರನ್ನು ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದಾರೆ ಎಂದು ವರದಿಯಾಗಿದೆ. ಮೂವರು ಅಪರಾಧಿಗಳು ಹಾಗೂ ಉತ್ತರ ಪ್ರದೇಶ ಮತ್ತು ಪಂಜಾಬ್ ಪೊಲೀಸರ ಜಂಟಿ ತಂಡಗಳ ನಡುವೆ ನಿನ್ನೆ ರಾತ್ರಿ ಗುಂಡಿನ ಚಕಮಕಿ ನಡೆದಿದೆ. ಪೊಲೀಸರು ಅವರನ್ನು ಬಂಧಿಸಲು ಪ್ರಯತ್ನಿಸಿದರು, ಆದರೆ ಅಪರಾಧಿಗಳು ಗುಂಡು ಹಾರಿಸಿದರು. ಗುರ್ವಿಂದರ್ ಸಿಂಗ್, ವೀರೇಂದ್ರ ಸಿಂಗ್ ಮತ್ತು ಜಸನ್‌ಪ್ರೀತ್ ಸಿಂಗ್ ತೀವ್ರ ಗಾಯಗಳಿಂದ ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರಿಂದ ಎಕೆ ಸರಣಿಯ ಎರಡು ರೈಫಲ್‌ಗಳು ಮತ್ತು ಗ್ಲಾಕ್ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಮೂವರು ಪಾಕಿಸ್ತಾನ ಪ್ರಾಯೋಜಿತ ಖಲಿಸ್ತಾನ್ ಜಿಂದಾಬಾದ್ ಫೋರ್ಸ್‌ನ ಭಾಗವಾಗಿದ್ದಾರೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ. “ಈ ಭಯೋತ್ಪಾದನಾ ಘಟಕವು ಪಂಜಾಬ್‌ನ ಗಡಿ ಪ್ರದೇಶಗಳಲ್ಲಿನ ಪೊಲೀಸರ ಮೇಲೆ ಗ್ರೆನೇಡ್ ದಾಳಿಯಲ್ಲಿ ತೊಡಗಿದೆ. ಈ ಮೂವರು ಘಟಕದ ಸದಸ್ಯರು ಭಾಗಿಯಾಗಿದ್ದಾರೆ. ಗುರುದಾಸಪುರದ ಪೊಲೀಸ್ ಪೋಸ್ಟ್ ಮೇಲೆ ಈ ಮೂರು ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದರು” ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಒಂದು ವಾರದೊಳಗೆ ಪಂಜಾಬ್‌ನ ಮೂರು ಪೊಲೀಸ್ ಠಾಣೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು ಮತ್ತು ಭದ್ರತಾ ಏಜೆನ್ಸಿಗಳು ಖಲಿಸ್ತಾನಿ ಭಯೋತ್ಪಾದಕರ ಪಾತ್ರದ ಶಂಕಿಸಿದ್ದಾರೆ.
ಶುಕ್ರವಾರ ಗುರುದಾಸಪುರದ ಬಂಗಾರ್ ಪೊಲೀಸ್ ಪೋಸ್ಟ್ ಮೇಲೆ ದಾಳಿ ನಡೆಸಿದ್ದರು. ಅಮೃತಸರದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸ್ಫೋಟ ಸಂಭವಿಸಿತ್ತು. ಬಕ್ಷಿವಾಲ್ ಹಾಗೂ ಗುರುದಾಸಪುರ ಪೊಲೀಸ್ ಠಾಣೆಯ ಹೊರಭಾಗದಲ್ಲಿಯೂ ಸ್ಫೋಟ ಸಂಭವಿಸಿತ್ತು,ಈ ಸ್ಫೋಟಗಳಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪರಿಶೀಲಿಸದ ಪೋಸ್ಟ್‌ನಲ್ಲಿ ಭಯೋತ್ಪಾದಕ ಸಂಘಟನೆ ಖಲಿಸ್ತಾನ್ ಜಿಂದಾಬಾದ್ ಫೋರ್ಸ್ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಹೇಳಿದೆ.
ಮೂಲಗಳ ಪ್ರಕಾರ, ಗುರುದಾಸಪುರದಿಂದ ಸುಮಾರು 750 ಕಿಮೀ ದೂರದಲ್ಲಿರುವ ಪಿಲಿಭಿತ್‌ಗೆ ಭಯೋತ್ಪಾದಕರು ಬಂದಿದ್ದು, ಸಿಖ್ ಜನಸಂಖ್ಯೆ ಇರುವ ಪ್ರದೇಶದಲ್ಲಿ ಅಡಗುತಾಣ ಹುಡುಕಲು ಬಂದಿದ್ದರು. ಆದರೆ ಸ್ಥಳೀಯರ ಸಂಪೂರ್ಣ ಬೆಂಬಲ ಸಿಕ್ಕಿದೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ