ಬೆಂಗಳೂರು : ಡಿಜಿಟಲ್ ಅರೆಸ್ಟ್ ಮೂಲಕ ನಗರದ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರಿಗೆ 11.83 ಕೋಟಿ ರೂ. ವಂಚನೆ ಮಾಡಲಾಗಿದೆ ಎಂದು ವರದಿಯಾಗಿದೆ.
ಈಶಾನ್ಯ ವಿಭಾಗದ ಸೆನ್ ಠಾಣೆಯ ಪೊಲೀಸರು ಪ್ರಕರಣದ ತನಿಖೆಗಾಗಿ ಎರಡು ತಂಡಗಳನ್ನು ರಚಿಸಿದ್ದಾರೆ.
ಒಂದು ತಂಡ ಗುಜರಾತಿಗೆ, ಮತ್ತೊಂದು ತಂಡ ಮಹಾರಾಷ್ಟ್ರಕ್ಕೆ ತೆರಳಿದ್ದು, ಸೈಬರ್ ವಂಚಕರಿಗಾಗಿ ಪತ್ತೆ ಕಾರ್ಯದಲ್ಲಿ ತೊಡಗಿವೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದನ್ನು ತಿಳಿದುಕೊಂಡ ಸೈಬರ್ ವಂಚಕರು ಟೆಕ್ಕಿ ಅವರನ್ನು ಟಾರ್ಗೆಟ್ ಮಾಡಿ 11.83 ಕೋಟಿ ರೂ. ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ನಗರದ ಸಾಫ್ಟ್ ವೇರ್ ಎಂಜಿನಿಯರ್ ಹಲವು ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದರು. ಸೈಬರ್ ಅವರನ್ನು ಡಿಜಿಟಲ್ ಅರೆಸ್ಟ್ ಮೂಲಕ ಬೆದರಿಕೆ ಹಾಕಿ 11.83 ಕೋಟಿ ರೂ. ಗಳನ್ನು ತಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಬೆಂಗಳೂರಿನ ಹೆಬ್ಬಾಳ ಸಮೀಪದ ಜಿಕೆವಿಕೆ ಲೇಔಟ್ ನಿವಾಸಿಯಾಗಿರುವ ಟೆಕ್ಕಿ ತಾನು ನವೆಂಬರ್ 25 ರಿಂದ ಡಿಸೆಂಬರ್ 15ರ ನಡುವೆ ಹಣ ಕಳೆದುಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಟೆಕ್ಕಿಗೆ ಕರೆ ಮಾಡಿದ ಸೈಬರ್ ವಂಚಕರು ತಮ್ಮನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರೆಂದು ಪರಿಚಯಿಸಿಕೊಂಡಿದ್ದಾರೆ. ನಿಮ್ಮ ಮೇಲೆ ಮುಂಬೈನ ಕೊಲಾಬಾದಲ್ಲಿ ಪ್ರಕರಣ ದಾಖಲಾಗಿದ್ದು, ನಿಮ್ಮ ಆಧಾರ್ ಕಾರ್ಡ್ ಬಳಸಿಕೊಂಡು 6 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಈಗ ಈ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ ಎಂದು ಹೆದರಿಸಿದ್ದಾರೆ.ನಂತರ ವಂಚಕರು ಮತ್ತೆ ವಿಡಿಯೋ ಕಾಲ್ ಮಾಡಿ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ. ನೀವು ಒಂದು ತಿಂಗಳು ಮನೆಯಲ್ಲಿ ಇರಬೇಕು ಎಂದು ಅಪ್ಪಣೆ ಮಾಡಿದ್ದಾರೆ. ಹೀಗಾಗಿ ಅವರು ಯಲಹಂಕದ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದರು. ನಂತರ ನಾವು ಐಟಿ-ಇಡಿ ಅಧಿಕಾರಿಗಳು ಎಂದು ಹೆದರಿಸಿ ಹಣಕ್ಕೆ ಬೇಡಿಕೆ ಇಟ್ಟು ಆನ್ಲೈನ್ ಬ್ಯಾಂಕಿಂಗ್ ಸೇರಿದಂತೆ ಹಲವು ಮಾರ್ಗಗಳ ಮುಖಾಂತರ ಹಣವನ್ನು ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲಿ ಅವರಿಂದ ಷೇರುಗಳನ್ನು ಮಾರಾಟ ಮಾಡಿಸಿದ್ದಾರೆ. ಬಳಿಕ ಒಂದು ತಿಂಗಳ ಕಾಲ ಹಂತ ಹಂತವಾಗಿ ಅವರಿಂದ 11.83 ಕೋಟಿ ರೂ. ಹಣವನ್ನು ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಈಶಾನ್ಯ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ