ಕಳೆದುಹೋಗಿ 25 ವರ್ಷಗಳ ನಂತರ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾದ ಬಳ್ಳಾರಿ ಜಿಲ್ಲೆಯ ಮಹಿಳೆ …!

ಬಳ್ಳಾರಿ: ಸುಮಾರು 25 ವರ್ಷಗಳ ನಂತರ ಮನೆಯವರ ಸಂಪರ್ಕವಿಲ್ಲದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಕೊನೆಗೂ ಪತ್ತೆಯಾಗಿದ್ದಾರೆ…! ಮೂಲತಃ ಬಳ್ಳಾರಿ ತಾಲೂಕಿನ ಕುರುವಳ್ಳಿ ಗ್ರಾಮದವರಾದ ಸಾಕಮ್ಮ ಎಂಬ ಮಹಿಳೆ ಹಿಮಾಚಲ ಪ್ರದೇಶದ ಮಂಡಿಯಲ್ಲಿ ಪತ್ತೆಯಾಗಿದ್ದು,ಅವರನ್ನು ಈಗ ಕರೆತರಲಾಗಿದೆ. 20 ವರ್ಷಗಳಿಗೂ ಹೆಚ್ಚು ಕಾಲ ಮನೆ ಬಿಟ್ಟು ಹೋಗಿದ್ದ ಬಳ್ಳಾರಿ ಮೂಲದ ಸಾಕವ್ವ ಪತ್ತೆಯಾಗಿದ್ದು, ಡಿಸೆಂಬರ್ 24ರಂದು ಸಂಜೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಏರ್​ಪೋರ್ಟ್​ನಲ್ಲಿ ಮಕ್ಕಳು ತಾಯಿಯನ್ನು ಬಿಗಿದಪ್ಪಿ ಗಳಗಳನೆ ಅತ್ತಿದ್ದಾರೆ.
50 ವರ್ಷದ ಮಹಿಳೆಯನ್ನು ವಾಪಸ್ ಕರೆತರಲು ಬಳ್ಳಾರಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಂಡಿಗೆ ತೆರಳಿದ್ದರು. ಮಂಡಿ ಜಿಲ್ಲೆಯ ಭಂಗ್ರೋಟು ವೃದ್ಧಾಶ್ರಮದಲ್ಲಿ ವಾಸವಾಗಿದ್ದ ಸಾಕಮ್ಮ ಅವರನ್ನು ಮಂಗಳವಾರ ಕರ್ನಾಟಕದ ಸಮಾಜ ಕಲ್ಯಾಣ ಇಲಾಖೆಯ ತಂಡಕ್ಕೆ ಮಂಡಿ ಜಿಲ್ಲಾಡಳಿತ ಆಕೆಯನ್ನು ಹಸ್ತಾಂತರಿಸಿದೆ.
ಮಂಡಿ ಜಿಲ್ಲಾಧಿಕಾರಿ ಅಪೂರ್ವ ದೇವಗನ್ ಮಾತನಾಡಿ, ಅಧಿಕಾರಿಗಳು ನಿಯಮಿತವಾಗಿ ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳನ್ನು ಪರಿಶೀಲಿಸುತ್ತಾರೆ. ಭಂಗ್ರೋಟು ವೃದ್ಧಾಶ್ರಮದಲ್ಲಿ ಇತ್ತೀಚೆಗೆ ಪರಿಶೀಲನೆ ನಡೆಸಿದಾಗ, ಹೆಚ್ಚುವರಿ ಉಪ ಆಯುಕ್ತ ರೋಹಿತ ರಾಥೋಡ್‌ ಅವರು ಹಿಂದಿ ಬಾರದ ಸಾಕಮ್ಮ ಅವರನ್ನು ಭೇಟಿ ಮಾಡಿದ್ದರು. ಆದರೆ ಭಾಷೆಯ ಕಾರಣ ಆಕೆಯ ಕುಟುಂಬದ ವಿವರಗಳನ್ನು ಪಡೆಯುವುದು ಕಷ್ಟವಾಯಿತು. ಮಂಡಿಯಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದ ಐಪಿಎಸ್ ಪ್ರೊಬೇಷನರ್ ರವಿನಂದನ್ ಅವರ ಸಹಾಯದಿಂದ ಮಹಿಳೆಯ ಕುಟುಂಬದ ವಿವರಗಳು ಗೊತ್ತಾದವು ಎಂದು ತಿಳಿಸಿದ್ದಾರೆ.
ಆಕೆ ನಾಪತ್ತೆಯಾಗಿ 25  ವರ್ಷಗಳು ಕಳೆದಿವೆ. ಆಕೆಯ ಮಕ್ಕಳು ಮತ್ತು ಮೊಮ್ಮಕ್ಕಳು ಸೇರಿದಂತೆ ಅವರ ಕುಟುಂಬವು ಅವಳು ಜೀವಂತವಾಗಿಲ್ಲ ಎಂದು ಭಾವಿಸಿದ್ದರು. ಅವರ ಅಂತಿಮ ಕಾರ್ಯ ಮಾಡಲಾಗಿತ್ತು. ಈ ಪತ್ತೆ ಕಾರ್ಯದಲ್ಲಿ ಪಾಲಂಪುರ ಎಸ್‌ಡಿಎಂ ನೇತ್ರಾ ಮೇಟಿ ಅವರ ಪ್ರಯತ್ನಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ ಎಂದು ಅವರು ಹೇಳಿದರು
ಮಂಡಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿನಂದನ್ ಬಿ.ಎಂ. ಎಂಬ ಪೊಲೀಸ್ ಅಧಿಕಾರಿ ಸಾಕಮ್ಮ ಅವರೊಂದಿಗೆ ಮಾತನಾಡಿ ವೀಡಿಯೊ ಮಾಡಿದ್ದರು. ನಂತರ ಈ ವೀಡಿಯೊವನ್ನು ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತ ವಿಜಯಕುಮಾರ ಅವರಿಗೆ ಕಳುಹಿಸಿದ್ದಾರೆ. ವಿಜಯಕುಮಾರ ಅವರು ಗುರುವಾರ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ವೀಡಿಯೋದಲ್ಲಿ ಸಾಕಮ್ಮ ತನ್ನ ಊರು ಹೊಸಪೇಟೆ ಸಮೀಪದ ಡಣಾನಾಯಕನಹಳ್ಳಿ ಎಂದು ಹೇಳಿದ್ದರು. ತಾನು ರೈಲಿನಲ್ಲಿ ಮಂಡಿ ಜಿಲ್ಲೆಗೆ ಬಂದು ಕೆಲವು ವರ್ಷಗಳಿಂದ ಇಲ್ಲೇ ಇದ್ದೇನೆ. ತನ್ನ ಹಳ್ಳಿಯಲ್ಲಿ ತನಗೆ ಒಬ್ಬ ಅಣ್ಣ ಮತ್ತು ತಂಗಿ ಇದ್ದಾರೆ ಎಂದು ಹೇಳಿದ್ದರು.
ಪೋಸ್ಟ್ ನೋಡಿದ ತಕ್ಷಣ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಅವರು ಗುರುವಾರ ಮಂಡಿ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿನಂದನ್ ಅವರನ್ನು ಸಂಪರ್ಕಿಸಿದರು. ನಂತರ ಸಾಕಮ್ಮನ ಬಗ್ಗೆ ಅವರ ಕುಟುಂಬದವರಿಗೆ ಗೊತ್ತಾಯಿತು. ಅಂದಿನಿಂದ ಸಮಾಜ ಕಲ್ಯಾಣ ಇಲಾಖೆಯು ಸಾಕಮ್ಮನನ್ನು ಮಂಡಿಯಿಂದ ಕರೆತರುವ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು.
ಸದ್ಯ ಬಳ್ಳಾರಿ ಹೊರವಲಯದ ಗುಗ್ಗರಹಟ್ಟಿಯಲ್ಲಿ ವಾಸವಾಗಿರುವ ಸಾಕಮ್ಮ ಅವರ ಪುತ್ರ ಯಲ್ಲಪ್ಪ, ‘ನಮ್ಮ ತಾಯಿ ಚಿಕ್ಕಂದಿನಲ್ಲಿ ನಾಪತ್ತೆಯಾಗಿದ್ದರು, ಈಗ ಪತ್ತೆಯಾಗಿದ್ದಾರೆ, ನಮ್ಮ ತಾಯಿ ಮರಳಿದ್ದಕ್ಕೆ ಬಹಳ ಸಂತೋಷವಾಗಿದೆ’ ಎಂದು ಹೇಳಿದ್ದಾರೆ.
25 ವರ್ಷಗಳ ಹಿಂದೆ ಸಾಕಮ್ಮ ತನ್ನ ಮಕ್ಕಳೊಂದಿಗೆ ಹೊಸಪೇಟೆಯಲ್ಲಿ ಸಂಬಂಧಿಕರ ಮದುವೆಗೆ ಹೋದಾಗ ಈ ಘಟನೆ ಪ್ರಾರಂಭವಾಯಿತು. ಸಾಕಮ್ಮ ಆಕಸ್ಮಿಕವಾಗಿ ಚಂಡೀಗಢಕ್ಕೆ ಹೋಗುವ ರೈಲನ್ನು ಹತ್ತಿದ್ದಾರೆ. ರೈಲು ಅವರನ್ನು ಬೇರೆ ಬೇರೆ  ರಾಜ್ಯಗಳಿಗೆ ಹೋಗುವಂತೆ ಮಾಡಿದೆ. ಅಲೆದಾಡುತ್ತ ಅವರು ಚಿಂದಿ ಸಹ ಆಯ್ದಿದ್ದಾರಂತೆ. ಅಂತಿಮವಾಗಿ ಸಾಕಮ್ಮ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ನಿರಾಶ್ರಿತರ ಸೌಲಭ್ಯದಲ್ಲಿ ಉಳಿಯುವಂತಾಯಿತು.

ಪ್ರಮುಖ ಸುದ್ದಿ :-   ಜನಿವಾರ ವಿವಾದ; ಸಿಇಟಿ ವಂಚಿತ ವಿದ್ಯಾರ್ಥಿ ಮತ್ತೊಮ್ಮೆ ಪರೀಕ್ಷೆ ಬರೆಯುವ ಬಗ್ಗೆ ಸೂಕ್ತ ಕ್ರಮ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement