ಭೋಪಾಲ: ಮಧ್ಯಪ್ರದೇಶದ ಜಬಲಪುರ ನಿಲ್ದಾಣದಲ್ಲಿ ರೈಲಿನ ರೋಲಿಂಗ್ ಸ್ಟಾಕ್ ಮತ್ತು ಅಂಡರ್ ಕ್ಯಾರೇಜ್‌ನ ದಿನನಿತ್ಯದ ತಪಾಸಣೆ ನಡೆಸುತ್ತಿದ್ದ ರೈಲ್ವೆ ಸಿಬ್ಬಂದಿ ಶುಕ್ರವಾರ ಬೋಗಿಯೊಂದರ ಕೆಳಗೆ ಚಕ್ರಗಳ ಮೇಲಿನ ಸಣ್ಣ ಜಾಗದಲ್ಲಿ ವ್ಯಕ್ತಿಯೊಬ್ಬ ಅಡಗಿಕೊಂಡಿರುವುದನ್ನು ಗಮನಿಸಿ ಆಘಾತಕ್ಕೊಳಗಾದರು.
ಆ ವ್ಯಕ್ತಿ ಇಟಾರ್ಸಿಯಿಂದ ತಾನು ಇದೇ ಸ್ಥಿತಿಯಲ್ಲಿ 250 ಕಿಮೀ ಪ್ರಯಾಣಿಸಿದ್ದಾಗಿ ಆತ ಹೇಳಿದಾಗ ಅವರಿಗೆ ಅಚ್ಚರಿ ಹಾಗೂ ಆಘಾತಕ್ಕೆ ಒಳಗಾದರು.
ಪುಣೆ-ದಾನಪುರ ಎಕ್ಸ್‌ಪ್ರೆಸ್‌ನ (ರೈಲು ಸಂಖ್ಯೆ 12149) ಎಸಿ-4 ಕೋಚ್‌ನ ಅಡಿಯಲ್ಲಿ ಕ್ಯಾರೇಜ್ ಮತ್ತು ವ್ಯಾಗನ್ ಇಲಾಖೆಯ ನೌಕರರು ಅಸಾಮಾನ್ಯ ಚಲನೆಯನ್ನು ಗಮನಿಸಿದರು. ನಂತರ ರೈಲನ್ನು ನಿಲ್ಲಿಸಲು ಲೋಕೋ ಪೈಲಟ್‌ಗೆ ಹೇಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಕ್ರಗಳ ಮೇಲಿರುವ ಟ್ರಾಲಿ ವಿಭಾಗದಲ್ಲಿ ಅಡಗಿಕೊಂಡಿದ್ದ ವ್ಯಕ್ತಿಯನ್ನು ನಂತರ ಹೊರಗೆ ಬರುವಂತೆ ಸೂಚಿಸಲಾಯಿತು. ಆತ ಹೊರಗೆ ಬಂದ ನಂತರ ರೈಲ್ವೇ ರಕ್ಷಣಾ ಪಡೆಗೆ (ಆರ್‌ಪಿಎಫ್) ಆತನನ್ನು ಒಪ್ಪಿಸಲಾಯಿತು.
ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ, ಆ ವ್ಯಕ್ತಿ ತಾನು ರೈಲು ಟಿಕೆಟ್ ಪಡೆಯಲು ಬೇಕಾದ ಹಣವಿರದ ಕಾರಣ ಜಬಲ್ಪುರವನ್ನು ತಲುಪಲು ಈ ರೀತಿಯ ಪ್ರಯಾಣ ಮಾಡಿದ್ದೇನೆ ಎಂದು ಹೇಳಿದ್ದಾನೆ. ಆದಾಗ್ಯೂ, ಆತ ಮಾನಸಿಕವಾಗಿ ಅಸ್ವಸ್ಥನಾಗಿರಬಹುದು ಎಂಬಂತೆ ಕಂಡುಬರುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವ್ಯಕ್ತಿಯ ಗುರುತು ಇನ್ನೂ ಯಾರೆಂಬುದು ಬಹಿರಂಗವಾಗಿಲ್ಲ. ಆ ವ್ಯಕ್ತಿ ರೈಲಿನ ಕೆಳಗೆ ಹೇಗೆ ಅಡಗಿಕೊಂಡಿದ್ದ ಎಂಬುದೂ ಅಸ್ಪಷ್ಟವಾಗಿದೆ. ಸದ್ಯ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ