ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರು ಸಾವು

ಬೆಂಗಳೂರು : ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಬೆಂಗಳೂರಿನ ಥಣಿಸಂದ್ರ ಮುಖ್ಯರಸ್ತೆಯ ಸಾರಾಯಿಪಾಳ್ಯ ಬಳಿ ಶನಿವಾರ ನಡೆದಿದೆ ಎಂದು ವರದಿಯಾಗಿದೆ.
ಮೃತ ಸಹೋದರಿಯರನ್ನು ಗೋವಿಂದಪುರದ ನಾಜಿಯಾ ಸುಲ್ತಾನ (30), ನಾಜಿಯಾ ಇರ್ಫಾನ (32) ಎಂದು ಗುರುತಿಸಲಾಗಿದೆ. ಇಂದು ಶನಿವಾರ ಮಧ್ಯಾಹ್ನ ಥಣಿಸಂದ್ರ ಮುಖ್ಯ ರಸ್ತೆಯ ಸರಾಯಿಪಾಳ್ಯದ ಬಳಿ ಬಿಬಿಎಂಪಿ ಕಸದ ಲಾರಿ ತೆರಳುತ್ತಿತ್ತು. ಈ ವೇಳೆ ಬೈಕ್​ ನಲ್ಲಿ ಬಂದ ಮಹಿಳೆಯರು ಕಸದ ಲಾರಿಯನ್ನು ಎಡಗಡೆಯಿಂದ ಓವರ್ ಟೇಕ್ ಮಾಡಲು ಮುಂದಾಗಿದ್ದಾರೆ. ಇದೇ ವೇಳೆ, ಎದುರಿಗೆ ಬೈಕ್​ ಬಂದಿದ್ದು, ಬೈಕ್​ನಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಗಾಡಿಯನ್ನು ಬಲಕ್ಕೆ ತಿರುಗಿದ್ದಾರೆ. ಈ ಸಮಯದಲ್ಲಿ ಪಕ್ಕದಲ್ಲಿದ್ದ ಲಾರಿಗೆ ಡಿಕ್ಕಿ ಹೊಡೆದು ಮಹಿಳೆಯರಿಬ್ಬರು ಕೆಳಗೆ ಬಿದ್ದಿದ್ದಾರೆ. ಆಗ ಅವರ ಮೇಲೆ ಲಾರಿ ಹರಿದು ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಹೆಣ್ಣೂರು ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement